Vijay Hazare Trophy: ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಕನ್ನಡಿಗ ಕರುಣ್ Vs ಕರ್ನಾಟಕ ಹಣಾಹಣಿ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯು ಕೊನೆಯ ಹಂತಕ್ಕೆ ಬಂದಿದೆ ಜನವರಿ 18 ಶನಿವಾರದಂದು ಫೈನಲ್ ಪಂದ್ಯ ನಡೆಯಲಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ 5ನೇ ಬಾರಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು, ಮಹಾರಾಷ್ಟ್ರ ವಿರುದ್ಧ ಸುಲಭ ಗೆಲುವು ಸಾಧಿಸಿರುವ ವಿದರ್ಭ ಎರಡನೇ ತಂಡವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಕರ್ನಾಟಕ ತಂಡದಲ್ಲಿ ಅವಕಾಶ ಸಿಗದ ಕಾರಣ ವಿದರ್ಭ ತಂಡಕ್ಕೆ ಸೇರಿದ ಕರುಣ್ ನಾಯರ್, ನಾಯಕತ್ವ ವಹಿಸಿಕೊಂಡಿದ್ದು ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ. ಪಂದ್ಯಾವಳಿಯಲ್ಲಿ ಐದು ಶತಕ ಬಾರಿಸಿರುವ ಕರುಣ್ ನಾಯರ್ ಭರ್ಜರಿ ಫಾರ್ಮ್‌ನಲ್ಲಿದ್ದು ತಮ್ಮ ಮಾಜಿ ತಂಡಕ್ಕೆ ಸವಾಲಾಕಲು ಸಜ್ಜಾಗಿದ್ದಾರೆ.

ಬಲಿಷ್ಠ ತಂಡಗಳು ಮುಖಾಮುಖಿ
ಕರ್ನಾಟಕ ಮತ್ತು ವಿದರ್ಭ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡಗಳಾಗಿದ್ದು ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಬಲಿಷ್ಠವಾಗಿದೆ. ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಎರಡೂ ತಂಡಗಳು ರೋಚಕ ಹೋರಾಟ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಶನಿವಾರ ನಡೆಯಲಿರುವ ಪಂದ್ಯದ ಮೇಲೆ ಬಿಸಿಸಿಐ ಆಯ್ಕೆಗಾರರು ಕಣ್ಣಿಟ್ಟಿದ್ದು ಭಾರತ ತಂಡಕ್ಕೆ ವಾಪಸಾತಿ ಮಾಡಲು ಹಲವು ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದ್ದು ಎಲ್ಲರೂ ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದ್ದಾರೆ.
ಮಯಾಂಕ್ Vs ಕರುಣ್ ನಾಯರ್
ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕರುಣ್ ನಾಯರ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಎರಡನೇ ಸ್ಥಾನದಲ್ಲಿದ್ದಾರೆ. ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆಯೇ ಇದ್ದು, ಫೈನಲ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಅಭಿನವ್ ಮನೋಹರ್, ಅನೀಶ್ ಕೆವಿ, ಸ್ಮರಣ್ ರವಿಚಂದ್ರನ್ ಕರ್ನಾಟಕದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಧ್ರುವ್ ಶೋರೆ, ಯಶ್ ರಾಥೋಡ್, ಕರುಣ್ ನಾಯರ್, ಜಿತೇಶ್ ಶರ್ಮಾ ವಿದರ್ಭ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ.
ಎರಡೂ ತಂಡಗಳಲ್ಲಿ ಬೌಲಿಂಗ್ ಕೂಡ ಉತ್ತಮವಾಗಿದೆ, ಎರಡೂ ತಂಡಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಬೌಲಿಂಗ್ ಸ್ವಲ್ಪ ಹೆಚ್ಚು ಬಲಿಷ್ಠವಾಗಿದ್ದು ಪ್ರಸಿದ್ಧ್ ಕೃಷ್ಣ, ಅಭಿಲಾಶ್ ಶೆಟ್ಟಿ, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್‌ರಂತಹ ಅನುಭವಿ ವೇಗಿಗಳಿದ್ದಾರೆ.
ಶನಿವಾರ ಮಧ್ಯಾಹ್ನ 1.30ಕ್ಕೆ ಫೈನಲ್ ಪಂದ್ಯ ಆರಂಭವಾಗಲಿದೆ. ವಡೋದರಾದ ಕೋತಂಬಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರವನ್ನು ನೋಡಬಹುದಾಗಿದೆ.
ಸಂಭಾವ್ಯ ಆಡುವ ಬಳಗ
ಕರ್ನಾಟಕ ; ಮಯಾಂಕ್ ಅಗರವಾಲ್ (ನಾಯಕ), ದೇವದತ್ ಪಡಿಕ್ಕಲ್, ಅನೀಶ್ ಕೆವಿ, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ.
ವಿದರ್ಭ ; ಧ್ರುವ ಶೋರೆ, ಯಶ್ ರಾಥೋಡ್, ಕರುಣ್ ನಾಯರ್ (ನಾಯಕ), ಅಪೂರ್ವ್ ವಾಂಖಡೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶುಭಂ ದುಬೆ, ಹರ್ಷ ದುಬೆ, ನಚಿಕೇತ್ ಭೂತೆ, ಪಾರ್ಥ್ ರೇಖಡೆ, ಯಶ್ ಠಾಕೂರ್, ದರ್ಶನ್ ನಲ್ಕಂಡೆ.












Click it and Unblock the Notifications