Breaking; 176 ತಾಲೂಕು ಮಟ್ಟದ ಕೋಚ್ ಹುದ್ದೆ ಮಂಜೂರು ಮಾಡಿದ ಸರ್ಕಾರ
ಬೆಂಗಳೂರು, ಅಕ್ಟೋಬರ್ 19; ಕರ್ನಾಟಕ ಸರ್ಕಾರ ತಾಲೂಕು ಮಟ್ಟದ 176 ಕೋಚ್ ಹುದ್ದೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ.
ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ತರಬೇತಿ ಸಿಗಬೇಕೆಂಬ ಉದ್ದೇಶದಿಂದ ಪ್ರತಿ ತಾಲೂಕಿಗೆ ಒಬ್ಬರಂತೆ 235 ಕೋಚ್ ಹುದ್ದೆಗಳ ಸೃಜನೆಗೆ ಸಚಿವರ ನಿರ್ದೇಶನದಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಹಲವು ಸುತ್ತಿನ ಸಭೆ, ಚರ್ಚೆಗಳು ನಡೆದ ಬಳಿಕ ಆರ್ಥಿಕ ಇಲಾಖೆ ಹಳೇ ತಾಲೂಕುಗಳನ್ನು ಪರಿಗಣಿಸಿ 176 ಕೋಚ್ ಕಂ ಸಂಯೋಜಕರ ಹುದ್ದೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಕ್ರೀಡಾ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತಾಲೂಕು ಮಟ್ಟದ ಹುದ್ದೆಗಳನ್ನು ಸೃಜಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.
ನಮ್ಮ ಸರ್ಕಾರ ಕ್ರೀಡೆಗೆ, ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗ್ರಾಮೀಣ ಪ್ರತಿಭೆಗಳಿಗೂ ಸೂಕ್ತ ತರಬೇತಿ ಹಾಗೂ ಹೆಚ್ಚಿನ ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ತಾಲೂಕು ಮಟ್ಟದ ಕೋಚ್‌ಗಳನ್ನು ನೇಮಕ ಮಾಡಲು ತೀರ್ಮಾನಿಸಿದ್ದು 176 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಈ ಹುದ್ದೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿರುವುದರಿಂದ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಚಿವ ಡಾ. ನಾರಾಯಣಗೌಡ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಜವಾಬ್ದಾರಿಗಳು
* ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುವ ಮೂಲಕ ತಾಲೂಕು ಮಟ್ಟದಲ್ಲಿ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
* ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ಒಳಗೊಂಡಂತೆ ತಾಲೂಕಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ತರಬೇತಿ ನೀಡುವುದು ಮತ್ತು ಉತ್ತೇಜಿಸುವುದು.
* ತಾಲೂಕು ಮಟ್ಟದ ಕ್ರೀಡಾಂಗಣಗಳ ನಿರ್ವಹಣೆ
* ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ಮತ್ತು ಯುವ ಜನರ ಅಭಿವೃದ್ಧಿಗಾಗಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಕರೊಂದಿಗೆ ಸಮನ್ವಯ ಮಾಡುವುದು
* ಇಲಾಖೆಯಿಂದ ನಿಯೋಜಿಸಲಾಗಿರುವ ಇತರ ಯಾವುದೇ ಜವಾಬ್ದಾರಿ ನಿರ್ವಹಣೆ ಮಾಡುವುದು.












Click it and Unblock the Notifications