Vijay Hazare Trophy: ವಿದರ್ಭ ವಿರುದ್ಧ ಭರ್ಜರಿ ಗೆಲುವು: ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ರಾಜ್‌ಕೋಟ್‌ನ ಸನೋಸರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿತು. ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಕರ್ನಾಟಕದ ಶಿಸ್ತಿನ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿತು. ನಾಯಕ ಅಥರ್ವ ಟೈಡೆ ಕೇವಲ 7 ರನ್ ಗಳಿಸಿ ಔಟಾದರೆ, ಅಕ್ಷಯ್ ವಡ್ಕರ್ 32 ರನ್ ಗಳಿಸಿದರು. ಕರ್ನಾಟಕ ತಂಡ ತೊರೆದು ವಿದರ್ಭ ತಂಡಕ್ಕಾಗಿ ಆಡುವ ಕರುಣ್ ನಾಯರ್ ಕೇವಲ 5 ರನ್ ಮಾತ್ರ ಗಳಿಸಿದರು.
ಯಶ್ ಕದಮ್ 38, ಶುಭಮ್ ದುಬೆ 41 ರನ್ ಗಳಿಸಿದರು. ಕೊನೆಯಲ್ಲಿ ದರ್ಶನ್ ನಲಕಂಡೆ 20 ಮತ್ತು ಉಮೇಶ್ ಯಾದವ್ 10 ರನ್ ಗಳಿಸುವ ಮೂಲಕ ವಿದರ್ಭ 44.5 ಓವರ್ ಗಳಲ್ಲಿ 173 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಕರ್ನಾಟಕ ಮಿಂಚಿನ ಬೌಲಿಂಗ್
ಕರ್ನಾಟಕ ಶಿಸ್ತಿನ ಬೌಲಿಂಗ್ ಮಾಡುವ ಮೂಲಕ ವಿದರ್ಭ ತಂಡವನ್ನು ಕಟ್ಟಿ ಹಾಕಿತು. ವಿಜಯ್ ಕುಮಾರ್ ವೈಶಾಖ್ 8.5 ಓವರ್ ಗಳಲ್ಲಿ 44 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಮನೋಜ್ ಭಾಂಡಗೆ ಮತ್ತು ಜಗದೀಶ್ ಸುಚಿತ್ ತಲಾ 2 ವಿಕೆಟ್ ಪಡೆದರು. ವಾಸುಕಿ ಕೌಶಿಕ್ ಒಂದು ವಿಕೆಟ್ ಪಡೆದರು.
174 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಅತ್ಯುತ್ತಮ ಆರಂಭ ಪಡೆದುಕೊಂಡಿತು. ರವಿಕುಮಾರ್ ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್‌ಗೆ 82 ರನ್‌ಗಳನ್ನು ಕಲೆಹಾಕಿದರು. ರವಿಕುಮಾರ್ ಸಮರ್ಥ್ ಅಜೇಯ 72 ರನ್ ಗಳಿಸಿದರು. ಮಯಾಂಕ್ ಅಗರ್ವಾಲ್ 51 ರನ್ ಗಳಿಸಿ ಔಟಾದರು. ನಿಕಿನ್ ಜೋಸ್ 31 ರನ್ ಗಳಿಸಿದರೆ, ಕೃಷ್ಣ ಶ್ರೀಜಿತ್ 15 ರನ್ ಗಳಿಸಿದರು. 40.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದ ಕರ್ನಾಟಕ 7 ವಿಕೆಟ್ ಜಯ ಸಾಧಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಡಿಸೆಂಬರ್ 14ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ : ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ನಿಕಿನ್ ಜೋಸ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ವಾಸುಕಿ ಕೌಶಿಕ್, ವಿಜಯ್ ಕುಮಾರ್ ವೈಶಾಕ್.
ವಿದರ್ಭ: ಯಶ್ ಕದಮ್, ಅಥರ್ವ ಟೈಡೆ (ನಾಯಕ), ಅಮನ್ ಮೊಖಡೆ, ಕರುಣ್ ನಾಯರ್, ಅಕ್ಷಯ್ ವಾಡ್ಕರ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಕ್ಷಯ್ ಕರ್ನೇವರ್, ಶುಭಂ ದುಬೆ, ಉಮೇಶ್ ಯಾದವ್, ದರ್ಶನ್ ನಲ್ಕಂಡೆ, ಯಶ್ ಠಾಕೂರ್.












Click it and Unblock the Notifications