Vijay Hazare Trophy: ಮಯಾಂಕ್ ಅಗರ್ವಾಲ್ ಶತಕ; ಪಂಜಾಬ್ ವಿರುದ್ಧ 1 ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಗುರುವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 1 ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿ ಬೀಗಿದೆ. ನಾಯಕ ಮಯಾಂಕ್ ಅಗರ್ವಾಲ್ ಕೊನೆಯವರೆಗೂ ಏಕಾಂಗಿ ಹೋರಾಟ ಮಾಡುವ ಮೂಲಕ ರಾಜ್ಯಕ್ಕೆ ಗೆಲುವಿನ ಖುಷಿ ತಂದುಕೊಟ್ಟರು. ಸತತ ಮೂರನೇ ಪಂದ್ಯ ಗೆದ್ದ ಕರ್ನಾಟಕ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 49.2 ಓವರ್ ಗಳಲ್ಲಿ 247 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಅನ್ಮೋಲ್‌ಪ್ರೀತ್ ಸಿಂಗ್ 51 ರನ್ ಗಳಿಸಿದರೆ, ಅನ್ಮೋಲ್ ಮಲ್ಹೋತ್ರಾ 42 ರನ್ ಗಳಿಸಿದರು, ಸನ್ವೀರ್ ಸಿಂಗ್ 35 ರನ್ ಗಳಿಸಿದರು.

ಅಭಿಲಾಶ್ ಶೆಟ್ಟಿ 10 ಓವರ್ ಗಳಲ್ಲಿ 44 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆಯುವ ಮೂಲಕ ಯಶಸ್ವೀ ಬೌಲರ್ ಎನಿಸಿಕೊಂಡರು. ನಿಕಿನ್ ಜೋಸ್ ಮತ್ತು ವಾಸುಕಿ ಕೌಶಿಕ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.
ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ
248 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಕರ್ನಾಟಕ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಮಾಡಿದರು, ಆರಂಭಿಕರಾಗಿ ಕಣಕ್ಕಿಳಿದ ಅವರು ಕೊನೆಯವರೆಗೂ ಕ್ರೀಸ್ ಕಚ್ಚಿ ನಿಂತು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
ನಿಕಿನ್ ಜೋಸ್ 13 ರನ್ ಗಳಿಸಿದರೆ, ಅನೀಶ್ ಕೆವಿ 7 ರನ್, ಸ್ಮರಣ್ ರವಿಚಂದ್ರನ್ 5 ರನ್ ಗಳಿಸಿದರು. ಕೃಷ್ಣನ್ ಶ್ರೀಜಿತ್ 9 ರನ್ ಗಳಿಸಿದರು. ಶ್ರೇಯಸ್ ಗೋಪಾಲ್ 39 ಎಸೆತಗಳಲ್ಲಿ 29 ರನ್ ಸಿಡಿಸಿ ನಾಯಕನ ಜೊತೆ ಉತ್ತಮ ಜೊತೆಯಾಟ ಆಡಿದರು. ಪ್ರವೀಣ್ ದುಬೆ 11 ರನ್ ಗಳಿಸಿದರೆ, ಅಭಿನವ್ ಮನೋಹರ್ 20 ರನ್ ಗಳಿಸಿ ಔಟಾದರು. ವಿಜಯ್ ಕುಮಾರ್ ವೈಶಾಖ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರೆ, ಅಭಿಲಾಶ್ ಶೆಟ್ಟಿ 1 ರನ್ ಗಳಿಸಿದರು.
203 ರನ್ ಆಗಿದ್ದಾಗ 9 ವಿಕೆಟ್ ಕಳೆದುಕೊಂಡ ಕರ್ನಾಟಕ ಸೋಲಿನ ಸುಳಿಗೆ ಸಿಲುಕಿತ್ತು, ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ಕಡೆ ಕ್ರೀಸ್ ಕಚ್ಚಿ ನಿಂತ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದರು. 127 ಎಸೆತಗಳಲ್ಲಿ 17 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 139 ರನ್ ಗಳಿಸಿದರು. ವಾಸುಕಿ ಕೌಶಿಕ್ 10 ಎಸೆತಗಳಲ್ಲಿ ಅಜೇಯ 7 ರನ್ ಗಳಿಸುವ ಮೂಲಕ ವಿಕೆಟ್ ಬೀಳದಂತೆ ನೋಡಿಕೊಂಡರು. 47.3 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿದ ಕರ್ನಾಟಕ 1 ವಿಕೆಟ್‌ನ ರೋಚಕ ಗೆಲುವು ಸಾಧಿಸಿತು.












Click it and Unblock the Notifications