IPL 2024: ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ; ರೋಹಿತ್ ಬಗ್ಗೆ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವ ಬದಲಾವಣೆಯ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಮಾಡಲು ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು.
ಮುಂಬೈ ಇಂಡಿಯನ್ಸ್ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಾರ್ದಿಕ್ ಪಾಂಡ್ಯ ವಿವಾದದ ಬಗ್ಗೆ ಮಾತನಾಡಿದ್ದು, ರೋಹಿತ್ ಮತ್ತು ತಮ್ಮ ನಡುವೆ ಯಾವುದೇ ಅಹಿತಕರ ಘಟನೆಗಳನ್ನು ನಿರೀಕ್ಷಿಸುವುದಿಲ್ಲ ಎಂದು ಹೇಳಿದರು.

ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಸಾಗಿರುವುದು ಅತೀವ ಸಂತೋಷಕ್ಕೆ ಕಾರಣವಾಗಿದೆ. ನಾನು ಇಲ್ಲಿಗೆ ತಲುಪುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ನೆಚ್ಚಿನ ಮೈದಾನವಾದ ವಾಂಖೆಡೆಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ ಎಂದು ಹಾರ್ದಿಕ್ ಹೇಳಿದ್ದಾರೆ.
ರೋಹಿತ್ ಶರ್ಮಾ ಬಗ್ಗೆ ಹೇಳಿದ್ದೇನು?
ನಾಯಕತ್ವ ಬದಲಾವಣೆಯ ಬಗ್ಗೆ ಕೇಳಿದಾಗ, ನನಗೆ ಅಗತ್ಯವಿದ್ದಾಗಲೆಲ್ಲಾ ರೋಹಿತ್ ಶರ್ಮಾ ಅವರು ನೆರವಾಗುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದರು.
"ರೋಹಿತ್ ಶರ್ಮಾ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿದ್ದಾರೆ, ಅದು ನನಗೆ ಸಹಾಯ ಮಾಡುತ್ತದೆ, ಈ ತಂಡವು ಏನೇ ಸಾಧಿಸಿದ್ದರೂ ಅದು ಅವರ ನಾಯಕತ್ವದಲ್ಲಿ ಸಾಧಿಸಿದೆ ಮತ್ತು ನಾನು ಅದನ್ನು ಮುಂದುವರಿಸುತ್ತೇನೆ. ನಾನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಇಡೀ ವೃತ್ತಿಜೀವನವನ್ನು ಆಡಿದ್ದೇನೆ ಮತ್ತು ಯಾವಾಗಲೂ ನನ್ನ ಭುಜದ ಮೇಲೆ ಅವರ ಕೈ ಇರುತ್ತದೆ ಎಂದು ನನಗೆ ತಿಳಿದಿದೆ" ಎಂದು ಹೇಳಿದ್ದಾರೆ.
ಹಾರ್ದಿಕ್ ಅವರು ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಬೌಲಿಂಗ್ ಮಾಡುತ್ತೇನೆ ಎಂದು ದೃಢಪಡಿಸಿದರು, ಈ ಹಿಂದೆ ಗಾಯದ ಕಾರಣದಿಂದಾಗಿ ಕೇವಲ ಬ್ಯಾಟರ್ ಆಗಿದ್ದರು.
ಅಭಿಮಾನಿಗಳ ಕೋಪದ ಬಗ್ಗೆ ಏನಂದ್ರು?
ನಾಯಕತ್ವ ಬದಲಾವಣೆಯ ಬಳಿಕ ರೋಹಿತ್ ಶರ್ಮಾ ಅಭಿಮಾನಿಗಳು ಹಾರ್ದಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ಬಗ್ಗೆಯೂ ಮಾತನಾಡಿರುವ ಹಾರ್ದಿಕ್ ಪಾಂಡ್ಯ, ನಿಯಂತ್ರಿಸಬಹುದಾದ ವಿಷಯಗಳ ಬಗ್ಗೆ ಮಾತ್ರ ಯೋಚಿಸಲು ಇಷ್ಟಪಡುವುದಾಗಿ ತಿಳಿಸಿದರು.
"ನಾನು ಬೌಲಿಂಗ್ ಮಾಡುತ್ತೇನೆ. ನಾನು ಅಭಿಮಾನಿಗಳ ಭಾವನೆಗಳನ್ನು ಗೌರವಿಸುತ್ತೇನೆ ಆದರೆ ನಾನು ನಿಯಂತ್ರಿಸಬಹುದಾದದನ್ನು ಮಾತ್ರ ನಿಯಂತ್ರಿಸಬಲ್ಲೆ. ನಾನು ಅವರನ್ನು ಗೌರವಿಸುತ್ತೇನೆ. ನಾಯಕನಾಗಿ ನಾನು ಏನು ಮಾಡಬಲ್ಲೆಎಂಬುದರ ಮೇಲೆ ನಾನು ಗಮನಹರಿಸುತ್ತೇನೆ" ಎಂದು ಹೇಳಿದರು.
ನಾಯಕತ್ವ ಬದಲಾದ ನಂತರ ನೀವು ರೋಹಿತ್ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ರೋಹಿತ್ ಶರ್ಮಾ ಸತತವಾಗಿ ಕ್ರಿಕೆಟ್ ಆಡಲು ಪ್ರಯಾಣಿಸುತ್ತಿರುವುದರಿಂದ ಯಾವುದೇ ಮಾತನಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
"ರೋಹಿತ್ ಪ್ರವಾಸದಲ್ಲಿರುವುದರಿಂದ ಅವರೊಂದಿಗೆ ಮಾತನಾಡಲು ನನಗೆ ಸಾಕಷ್ಟು ಸಮಯ ಸಿಕ್ಕಿಲ್ಲ. ಅವರು ತಂಡದೊಂದಿಗೆ ಸಂಪರ್ಕ ಸಾಧಿಸಿದಾಗ ನಾನು ಖಂಡಿತವಾಗಿಯೂ ಮಾತನಾಡುತ್ತೇನೆ" ಎಂದು ಅವರು ಹೇಳಿದರು.












Click it and Unblock the Notifications