IPL 2023: ಆತ ಆರಂಭಿಕನಾಗಿ ಆಡಿದ್ದರೆ ರಾಜಸ್ಥಾನ ರಾಯಲ್ಸ್ ಗೆಲ್ಲುತ್ತಿತ್ತು ಎಂದ ಯೂಸುಫ್ ಪಠಾಣ್
ಏಪ್ರಿಲ್ 5 ರಂದು ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕುಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 5 ರನ್‌ಗಳಿಂದ ರೋಚಕ ಸೋಲು ಅನುಭವಿಸಿದೆ. 198 ರನ್‌ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹಿರಿಯ ಬೌಲರ್ ಅಶ್ವಿನ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸುವ ಮೂಲಕ ಅಚ್ಚರಿ ಮೂಡಿಸಿದರು. ಜೋಸ್ ಬಟ್ಲರ್ ಬದಲಾಗಿ ಅಶ್ವಿನ್ ಆರಂಭಿಕರಾಗಿ ಕಣಕ್ಕಿಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 10 ವರ್ಷಗಳ ಬಳಿಕ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದರು. 4 ಎಸೆತಗಳನ್ನು ಎದುರಿಸಿದ ಅವರು ಖಾತೆ ತೆರೆಯದೇ ಔಟಾದರು. ಜೋಸ್ ಬಟ್ಲರ್ ಫೀಲ್ಡಿಂಗ್ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದರಿಂದ ಅಶ್ವಿನ್ ಆರಂಭಿಕರಾಗಿ ಕಣಕ್ಕಿಳಿದರು ಎನ್ನಲಾಗಿದೆ. ನಂತರ ಬಂದ ಜೋಸ್ ಬಟ್ಲರ್ ಕೂಡ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. 11 ಎಸೆತಗಳಲ್ಲಿ 19 ರನ್ ಗಳಿಸಿ ನಾಥಲ್ ಎಲ್ಲಿಸ್ ಅವರ ಬೌಲಿಂಗ್‌ನಲ್ಲಿ ಔಟಾದರು.

ರಾಜಸ್ಥಾನ ರಾಯಲ್ಸ್ ಸೋಲಿನ ಬಗ್ಗೆ ಮಾತನಾಡಿರುವ ಯೂಸುಫ್ ಪಠಾಣ್ ರವಿಚಂದ್ರನ್ ಅಶ್ವಿನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದು ತಪ್ಪು ನಿರ್ಧಾರ ಎಂದು ಹೇಳಿದ್ದಾರೆ. ಅಶ್ವಿನ್ ಬದಲಾಗಿ ದೇವದತ್ ಪಡಿಕ್ಕಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರೆ ಪಂದ್ಯದ ಫಲಿತಾಂಶ ಬದಲಾಗುತ್ತಿತ್ತು ಎಂದು ಪಠಾಣ್ ಹೇಳಿದ್ದಾರೆ. ಅನುಭವಿ ಆರಂಭಿಕ ಆಟಗಾರ ಪಡಿಕ್ಕಲ್ ಇದ್ದಾಗಲೂ ಅಶ್ವಿನ್ ಅವರನ್ನು ಆರಂಭಿಕರಾಗಿ ಕಳಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಆರ್‌ಸಿಬಿ ತಂಡದ ಆರಂಭಿಕರಾಗಿದ್ದ ಪಡಿಕ್ಕಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡುವಾಗ ದೇವದತ್ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಮತ್ತು ಉತ್ತಮ ಪ್ರದರ್ಶನ ಕೂಡ ನೀಡಿದ್ದರು. ಆರಂಭಿಕನಾಗಿ ಆಡಿ ಯಶಸ್ಸು ಕಂಡಿದ್ದ ಬ್ಯಾಟರ್ ತಂಡದಲ್ಲಿದ್ದರೂ, ಬಟ್ಲರ್ ಗಾಯಗೊಂಡ ನಂತರ ಅಶ್ವಿನ್‌ರನ್ನು ಕಣಕ್ಕಿಳಿಸುವ ಅಗತ್ಯವೇನಿತ್ತು ಎಂದಿದ್ದಾರೆ. "ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ತೆರೆಯುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವರು ದೇವದತ್ ಪಡಿಕ್ಕಲ್ ಅವರನ್ನು ಹೊಂದಿದ್ದರು, ಅವರು ಕರ್ನಾಟಕಕ್ಕಾಗಿ ಆಡುವಾಗ ಕೂಡ ಇನ್ನಿಂಗ್ಸ್ ಆರಂಭಿಸುತ್ತಾರೆ ಮತ್ತು ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೂಡ ಇದನ್ನು ಮಾಡಿದ್ದಾರೆ." ಎಂದು ಹೇಳಿದರು.

"ನಾನು ಪಡಿಕ್ಕಲ್ ತೆರೆಯುತ್ತಾರೆ ಎಂದು ನಿರೀಕ್ಷಿಸಿದ್ದೆ, ಆದರೆ ರಾಜಸ್ಥಾನ ರಾಯಲ್ಸ್ ಅಶ್ವಿನ್ ಅವರನ್ನು ಆಯ್ಕೆ ಮಾಡಿತು. ಪಡಿಕ್ಕಲ್ ಅವರು ಹಲವಾರು ವರ್ಷಗಳಿಂದ ಹೊಸ ಚೆಂಡಿನಲ್ಲಿ ಆಡುತ್ತಿರುವುದರಿಂದ ಇನ್ನಿಂಗ್ಸ್ ಅನ್ನು ತೆರೆದಿದ್ದರೆ ಫಲಿತಾಂಶವು ಬೇರೆಯಾಗಿರುತ್ತಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಆಡುವಾಗಿಂತ ಆರಂಭಿಕರಾಗಿ ಅವರ ಪ್ರದರ್ಶನ ಉತ್ತಮವಾಗಿದೆ" ಎಂದು ಯೂಸುಫ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
ಅಶ್ವಿನ್ ಅವರನ್ನು ಕೆಳಗಿನ ಕ್ರಮಾಂಕದಲ್ಲೇ ಬಳಸಿಕೊಳ್ಳಬೇಕು. ಅಶ್ವಿನ್ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅಂತಹ ಸನ್ನಿವೇಶಗಳಲ್ಲಿ ಆಡಿ ಅವರಿಗೆ ಅನುಭವ ಕೂಡ ಇದೆ. ಭಾರತ ತಂಡಕ್ಕಾಗಿ ಕೂಡ ಅವರು ಅದನ್ನು ಮಾಡುತ್ತಾರೆ, 10 ಓವರ್‌ಗಳ ನಂತರ ಬಾಲ್ ಸ್ವಲ್ಪ ಹಳೆಯದಾದ ನಂತರ ಅಶ್ವಿನ್ ಅವರನ್ನು ಬಳಸಬಹುದಿತ್ತು, ಹೊಸ ಚೆಂಡನ್ನು ಎದುರಿಸುವುದು ಸುಲಭವಲ್ಲ, ಮತ್ತು ಅದು ಸ್ವಲ್ಪ ಅನುಭವ ಹೊಂದಿರುವ ಆರಂಭಿಕ ಆಟಗಾರನನ್ನು ಹೊಂದಿರುವುದು ಯಾವಾಗಲೂ ಉತ್ತಮ ಎಂದು ಪಠಾಣ್ ಹೇಳಿದ್ದಾರೆ.
ಅಶ್ವಿನ್ ನಾಲ್ಕು ಎಸೆತಗಳಲ್ಲಿ ಡಕ್‌ಗೆ ಔಟಾಗಿದ್ದರಿಂದ ರಾಯಲ್ಸ್‌ಗೆ ಈ ತಂತ್ರ ಹಿನ್ನಡೆಯಾಯಿತು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪಡಿಕ್ಕಲ್ 26 ಎಸೆತಗಳಲ್ಲಿ 21 ರನ್ ಗಳಿಸಿ ಔಟಾಗಿದ್ದು ರಾಜಸ್ಥಾನ ಸೋಲಿಗೆ ಪ್ರಮುಖ ಕಾರಣವಾಯಿತು. ಮುಂದಿನ ಪಂದ್ಯಗಳಲ್ಲಾದರೂ ಪಡಿಕ್ಕಲ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ಬದಲಾಗಿ ಆರಂಭಿಕರಾಗಿ ಕಣಕ್ಕಿಳಿಸಿದರೆ ಉತ್ತಮ ಎಂದು ಹೇಳಿದ್ದಾರೆ.












Click it and Unblock the Notifications