IPL 2023: CSK ಯಶಸ್ಸಿಗೆ ಧೋನಿ ಮಾತ್ರವಲ್ಲ ಈತನೂ ಕಾರಣ ಎಂದ ಕೆವಿನ್ ಪೀಟರ್ಸನ್!
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡ ಆಡಿರುವ 14 ಆವೃತ್ತಿಗಳಲ್ಲಿ 10ನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದಂತಾಗಿದೆ. ಇದೀಗ ಐಪಿಎಲ್‌ನಲ್ಲಿ 5ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಅದ್ಭುತ ಅವಕಾಶ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಸಿಎಸ್‌ಕೆ ತಂಡದ ಸಾಧನೆಯ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದು ಈ ಸಾಧನೆಗೆ ಕಾರಣವಾದ ಇಬ್ಬರು ಪ್ರಮುಖ ವ್ಯಕ್ತಿಗಳ ಬಗ್ಗೆ ಪೀಟರ್ಸನ್ ಕೊಂಡಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಈ ಪ್ರಮಾಣದ ಯಶಸ್ಸು ಸಾಧಿಸಲು ನಾಯಕ ಎಂಎಸ್ ಧೋನಿಯ ರಣತಂತ್ರ ಹಾಗೂ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಶಾಂತ ಮನೋಭಾವ ಪ್ರಮುಖ ಕಾರಣ ಎಂದಿದ್ದಾರೆ ಕೆವಿನ್ ಪೀಟರ್ಸನ್. "ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಎಂಎಸ್ ಧೋನಿಯ ರಣತಂತ್ರ ಎಷ್ಟು ಉತ್ತಮ ಪಾತ್ರವಹಿಸಿತೋ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಶಾಂತ ಮನೋಭಾವ ಕೂಡ ಅಷ್ಟೇ ಪರಿಣಾಮಕಾರಿಯಾಗಿತ್ತು" ಎಂದಿದ್ದಾರೆ ಕೆವಿನ್ ಪೀಟರ್ಸನ್.

"ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡು ತಂಡಗಳಿಗೂ ಕೂಡ ಅದ್ಭುವಾದ ನಾಯಕತ್ವವಿದೆ. ಸ್ಥೊರವಾದ ನಾಯಕರಿದ್ದಾರೆ. ಅವರು ಹೊಂದಿರುವ ಬೌಲಿಂಗ್ ವಿಭಾಗದಿಮದ ಅದ್ಭುತವಾದ ಪ್ರದರ್ಶನ ಬರುತ್ತಿದೆ. ಟೂರ್ನಿಯುದ್ದಕ್ಕೂ ಅವರಿಂದ ಅದ್ಭುತವಾದ ಪ್ರದರ್ಶನ ಬಂದಿದೆ" ಎಂದು ಕೆವಿನ್ ಪೀಟರ್ಸನ್ ಪ್ರತಿಕ್ರಿಯೆ ನೀಡಿದ್ದಾರೆ.
"ಮುಂಬೈ ಇಂಡಿಯನ್ಸ್ ತಂಡವನ್ನು ನೋಡಿದರೆ ಅವರು ಉತ್ತಮ ಆರಂಭವನ್ನು ಪಡೆದಿರಲಿಲ್ಲ. ಆದರೆ ಅವರು ಒಮ್ಮೆ ಲಯಕಂಡುಕೊಂಡ ಬಳಿಕ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಕ್ಯಾಮರೂನ್ ಗ್ರೀನ್ ಅವರನ್ನು ಸೇರ್ಪಡೆಗೊಳಿಸಿರುವುದು ಬಹಳ ದೊಡ್ಡ ಪ್ರಭಾವ ಬೀರಿದೆ. ಜೋಫ್ರಾ ಆರ್ಚರ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂಥಾ ಆಟಗಾರರ ಸೇವೆಯಿಂದ ವಂಚಿತವಾಗಿದ್ದೂ ಅದ್ಭುತವಾಗಿ ಪ್ರದರ್ಶನ ನೀಡುತ್ತಿದೆ" ಎಂದಿದ್ದಾರೆ ಕೆವಿನ್ ಪೀಟರ್ಸನ್.
ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪರಿಣಾಮ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಗಿತ್ತು. ಆದರೆ ಈ ಬಾರಿ ಮತ್ತೆ ಅದ್ಭುತ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ಗೆ ನೇರವಾಗಿ ಪ್ರವೇಶ ಗಿಟ್ಟಿಸಿಕೊಂಡಿತ್ತು.
ಇಂದು ಎರಡನೇ ಕ್ವಾಲಿಫಯರ್ ಪಂದ್ಯ ನಡೆಯುತ್ತಿದ್ದು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶಿಲಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣೆಸಾಡಲಿದೆ.












Click it and Unblock the Notifications