Radha Yadav: ಪ್ರವಾಹದಲ್ಲಿ ಸಿಲುಕಿದ ಭಾರತದ ಕ್ರಿಕೆಟರ್; ರಕ್ಷಣೆ ಮಾಡಿದ ಎನ್‌ಡಿಆರ್‌ಎಫ್
ಗುಜರಾತ್‌ನ ವಡೋದರಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗುತ್ತಿದೆ. ಭಾರಿ ಮಳೆಯ ಕಾರಣ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇದೀಗ ಭಾರತ ಮಹಿಳಾ ತಂಡದ ಸ್ಟಾರ್ ಸ್ಪಿನ್ನರ್ ರಾಧಾ ಯಾದವ್ ಕೂಡ ಪ್ರವಾಹದಲ್ಲಿ ಸಿಕ್ಕಿಬಿದ್ದಿದ್ದು, ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣೆ ಮಾಡಿದೆ. ಭಾರಿ ಮಳೆಯಿಂದಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದ ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಶ್ವಾಮಿತ್ರಿ ನದಿಯು ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಅನೇಕ ಪ್ರದೇಶಗಳು ಮುಳುಗಡೆಯಾಗಿದ್ದವು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ್ದು ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡುತ್ತಿದೆ.

ಕ್ರಿಕೆಟರ್ ರಾಧಾ ಯಾದವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನೋವಿನ ಅನುಭವವನ್ನು ಹಂಚಿಕೊಂಡಿದ್ದು, ವಡೋದರಾದಲ್ಲಿ ಸದ್ಯ ಪರಿಸ್ಥಿರಿ ಹೇಗಿದೆ ಎಂದು ತೋರಿಸಲು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ರಸ್ತೆಗಳು ನದಿಗಳಂತಾಗಿದ್ದು, ವಾಹನ ಸವಾರರು ಪರದಾಡುಂತಾಗಿದೆ. ಅನೇಕ ಕಟ್ಟಡಗಳು, ವಾಹನಗಳು ನೀರಿನಲ್ಲಿ ಮುಳುಗಿರುವುದನ್ನು ನೋಡಬಹುದು.
ಎನ್‌ಡಿಆರ್‌ಎಫ್‌ಗೆ ಧನ್ಯವಾದ ತಿಳಿಸಿದ ರಾಧಾ
ತಮ್ಮ ಮತ್ತೊಂದು ಪೋಸ್ಟ್‌ನಲ್ಲಿ ರಾಧಾ ಯಾದವ್ ಎನ್‌ಡಿಆರ್‌ಎಫ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿದ್ದೇವು, ನಮ್ಮನ್ನು ರಕ್ಷಿಸಿದ್ದಕ್ಕಾಗಿ ಎನ್‌ಡಿಆರ್‌ಎಫ್‌ಗೆ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ. ಎನ್‌ಡಿಆರ್‌ಎಫ್ ಸಿಬ್ಬಂದಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿರುವುದನ್ನು, ದೋಣಿಗಳಲ್ಲಿ ಪ್ರವಾಹದಲ್ಲಿ ಸಿಕ್ಕಿಬಿದ್ದ ನಿವಾಸಿಗಳನ್ನು ಸುರಕ್ಷಿತವಾಗಿ ಸಾಗಿಸುವುದನ್ನು ವೀಡಿಯೊಗಳಲ್ಲಿ ನೋಡಬಹುದು.
ಬರೋಡಾದಲ್ಲಿ ಪ್ರವಾಹ ಬಿಕ್ಕಟ್ಟು
ವಡೋದರಾದಲ್ಲಿ ಭೀಕರ ಪ್ರವಾಹ ನಗರವನ್ನು ಹಾನಿ ಮಾಡಿದೆ. ಅನೇಕ ಪ್ರದೇಶಗಳು ಮುಳುಗಿಹೋಗಿವೆ. ವಿಶ್ವಾಮಿತ್ರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ರಾಧಾ ಯಾದವ್ ಸೇರಿ ಅನೇಕ ಪ್ರಮುಖ ವ್ಯಕ್ತಿಗಳು ಸೇರಿ ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹದ ನಡುವೆಯೇ ಭಾರತ ಹವಾಮಾನ ಇಲಾಖೆ (IMD) ಈ ಭಾಗದಲ್ಲಿ ಭಾರಿ ಮಳೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಸೌರಾಷ್ಟ್ರದ ಭಾಗಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಅಂದಾಜಿಸಲಾಗಿದ್ದು, ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಇರ್ಫಾನ್ ಪಠಾಣ್ ಮನವಿ
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದು, ಪ್ರವಾಹ ಪರಿಸ್ಥಿತಿ ಇರುವ ಕಾರಣ, ಜನ ಸುರಕ್ಷಿತವಾಗಿ ಇರಬೇಕು ಎಂದು ಮನವಿ ಮಾಡಿದ್ದಾರೆ. ಮನೆಯೊಳಗೆ ಇರುವಂತೆ ಮತ್ತು ಸುರಕ್ಷಿತವಾಗಿ ಇರುವುದಕ್ಕೆ ಆದ್ಯತೆ ನೀಡುವಂತೆ ಕೇಳಿದ್ದಾರೆ.












Click it and Unblock the Notifications