Ind vs NZ: ಚಕ್ರವರ್ತಿಗೆ ಶರಣಾದ ನ್ಯೂಜಿಲೆಂಡ್; ಅಗ್ರಸ್ಥಾನದ ಜೊತೆ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ಗೆ ಭಾರತ!
ದುಬೈನ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯಾವಳಿಯಲ್ಲಿ ಮೊದಲ ಪಂದ್ಯ ಆಡಿದ ವರುಣ್ ಚಕ್ರವರ್ತಿ ನ್ಯೂಜಿಲೆಂಡ್‌ಗೆ ಸೋಲಿನ ಖೆಡ್ಡಾ ತೋಡಿದರೆ, ಉಳಿದ ಬೌಲರ್ ಗಳು ಕೂಡ ಕೈ ಜೋಡಿಸಿದರು. ಈ ಮೂಲಕ ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡದುಕೊಂಡಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 249 ರನ್‌ಗಳಿಗೆ ಆಲೌಟ್ ಆಯಿತು. ಶ್ರೇಯಸ್ ಅಯ್ಯರ್ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರೆ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡುವ ಮೂಲಕ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.

250 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 45.3 ಓವರ್ ಗಳಲ್ಲಿ 205 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ವರುಣ್ ಚಕ್ರವರ್ತಿ 10 ಓವರ್ ಗಳಲ್ಲಿ 42 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಕುಲದೀಪ್ ಯಾದವ್ 2 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಎರಡನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆಟಗಾರ ಎನಿಸಿಕೊಂಡಿದ್ದಾರೆ ವರುಣ್ ಚಕ್ರವರ್ತಿ. 2013ರಲ್ಲಿ ರವೀಂದ್ರ ಜಡೇಜಾ 36 ರನ್ ನೀಡಿ 5 ವಿಕೆಟ್ ಪಡೆದಿರುವುದು ಈವರೆಗಿನ ಉತ್ತಮ ಸಾಧನೆಯಾಗಿದ್ದು. ವರುಣ್ ಚಕ್ರವರ್ತಿ 42 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
ವರುಣ್ ಚಕ್ರವರ್ತಿ ಹೇಳಿದ್ದೇನು?
ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಕೂಡ ಸಿಕ್ಕಿತು. ಬಳಿಕ ಮಾತನಾಡಿದ ವರುಣ್ ಚಕ್ರವರ್ತಿ, ಆರಂಭಿಕ ಹಂತದಲ್ಲಿ ನನಗೆ ಆತಂಕವಿತ್ತು, ನಾನು ಭಾರತ ತಂಡದ ಪರವಾಗಿ ಏಕದಿನ ಪಂದ್ಯಗಳನ್ನು ಆಡಿಲ್ಲ. ಆದರೆ ಆಟ ಮುಂದುವರೆದಂತೆ ನನಗೆ ಸ್ವಲ್ಪ ಸಮಾಧಾನವಾಯಿತು. ವಿರಾಟ್, ರೋಹಿತ್, ಶ್ರೇಯಸ್ ಮತ್ತು ಹಾರ್ದಿಕ್ ಪಾಂಡ್ಯ ನನ್ನ ಜೊತೆ ಆಗಾಗ್ಗೆ ಮಾತನಾಡುತ್ತಿದ್ದರಿಂದ ನನಗೆ ಸಮಾಧಾನವಾಯಿತು. ಅದು ನನಗೆ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿತು ಎಂದರು.
ನಿನ್ನೆ ರಾತ್ರಿಯಷ್ಟೇ ನನಗೆ ಇಂದಿನ ಪಂದ್ಯವನ್ನು ಆಡುತ್ತೇನೆ ಎಂದು ತಿಳಿಯಿತು. ದೇಶಕ್ಕಾಗಿ ಆಡಬೇಕು ಎಂದು ನಾನು ನಿರೀಕ್ಷೆ ಮಾಡುತ್ತಿದ್ದೆ ಮತ್ತೊಂದು ಕಡೆ ನಾನು ಆತಂಕಕ್ಕೆ ಒಳಗಾಗಿದ್ದೆ. ಇದು ರ‍್ಯಾಂಕ್ ಟರ್ನರ್ ವಿಕೆಟ್ ಅಲ್ಲ, ಆದರೆ ನೀವು ಸರಿಯಾದ ಸ್ಥಳಗಳಲ್ಲಿ ಬೌಲಿಂಗ್ ಮಾಡಿದರೆ ಪಿಚ್ ಸಹಾಯ ಮಾಡುತ್ತಿತ್ತು. ಕುಲ್ದೀಪ್, ಜಡೇಜಾ ಮತ್ತು ಅಕ್ಷರ್ ಬೌಲಿಂಗ್ ಮಾಡಿದ ರೀತಿ, ಹಾಗೂ ವೇಗಿಗಳೂ ಸಹ ಉತ್ತಮ ಬೌಲಿಂಗ್ ಮಾಡಿದರು, ತಂಡದ ಪ್ರಯತ್ನದಿಂದ ಗೆಲುವು ಸಿಕ್ಕಿದೆ ಎಂದು ಹೇಳಿದರು.












Click it and Unblock the Notifications