India vs Sri Lanka: ಟಿ20 ಬಳಿಕ ಏಕದಿನ ಪಂದ್ಯ ಕೂಡ ರೋಚಕ ಟೈನಲ್ಲಿ ಅಂತ್ಯ
ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಬಳಿಕ ಏಕದಿನ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿದಿ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಗೆಲ್ಲುವ ಪಂದ್ಯವನ್ನು ಟೈ ಮಾಡಿಕೊಂಡಿದ್ದು, ಟಿ20 ಸರಣಿಯ ಕೊನೆಯ ಪಂದ್ಯ ಟೈನಲ್ಲಿ ಅಂತ್ಯವಾಗಿದ್ದಂತೆ ಏಕದಿನ ಸರಣಿಯ ಮೊದಲನೇ ಪಂದ್ಯ ಕೂಡ ಟೈನಲ್ಲಿ ಅಂತ್ಯವಾಗಿದೆ.
ಪಂದ್ಯ ಸೋಲಲಿಲ್ಲ ಎಂದು ನಿಟ್ಟುಸಿರು ಬಿಡಬೇಕೋ ಅಥವಾ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಟೈ ಮಾಡಿಕೊಂಡೆವು ಎಂದು ಬೇಸರ ಪಡಬೇಕೋ ಎನ್ನುವ ಗೊಂದಲ ಅಭಿಮಾನಿಗಳದ್ದಾಗಿತ್ತು. ಟಿ20 ಮಾದರಿಯಲ್ಲಿ ಪಂದ್ಯ ಟೈ ಅದರೆ ಗೆಲುವನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಗುತ್ತದೆ. ಆದರೆ ಏಕದಿನ ಪಂದ್ಯ ಟೈ ಆದರೆ ಫಲಿತಾಂಶವನ್ನು ಕೂಡ ಟೈ ಎಂದೇ ಪರಿಗಣಿಸಲಾಗುತ್ತದೆ.

ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿತು. ಪಾಥುಮ್ ನಿಸಂಕ 56 ರನ್ ಗಳಿಸಿದರೆ, ದುನಿತ್ ವೆಲ್ಲಲಗೆ 65 ಎಸೆತಗಳಲ್ಲಿ ಅಜೇಯ 67 ರನ್ ಸಿಡಿಸುವ ಮೂಲಕ ಶ್ರೀಲಂಕಾ 230 ರನ್ ಗಳಿಸಲು ನೆರವಾದರು.
ಭಾರತದ ಪರವಾಗಿದೆ ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಶಿವಂ ದುಬೆ, ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದುಕೊಂಡರು.
ಉತ್ತಮ ಆರಂಭ ಪಡೆದ ಭಾರತ
231 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಸುಲಭವಾಗಿ ಗೆಲ್ಲಲು ಅಡಿಪಾಯ ಹಾಕಿಕೊಟ್ಟರು. ಆದರೆ ಬಳಿಕ ಬಂದ ಬ್ಯಾಟರ್ ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ರೋಹಿತ್ ಶರ್ಮಾ 58 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳಿಂದ ದೊಡ್ಡ ಮೊತ್ತ ಬರಲಿಲ್ಲ. ಶುಭಮನ್ ಗಿಲ್ 16 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 24 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 5 ರನ್ ಗಳಿಸಿ ಔಟಾದರೆ, ಶ್ರೇಯಸ್ ಅಯ್ಯರ್ 23, ಅಕ್ಷರ್ ಪಟೇಲ್ 33, ಶಿವಂ ದುಬೆ 25 ರನ್ ಗಳಿಸಿದರು.
ಕೊನೆಯ ಮೂರು ಓವರ್ ಗಳಲ್ಲಿ ಭಾರತದ ಗೆಲುವಿಗೆ 5 ರನ್‌ಗಳ ಅವಶ್ಯಕತೆ ಇತ್ತು, ಇನ್ನೂ ಎರಡು ವಿಕೆಟ್ ಭಾರತದ ಕೈಯಲ್ಲಿದ್ದವು. ಅಸಲಂಕ ಬೌಲಿಂಗ್ ದಾಳಿಗೆ ಇಳಿದರು, ಮೂರನೇ ಎಸೆತದಲ್ಲೇ ಶಿವಂ ದುಬೆ ಬೌಂಡರಿ ಬಾರಿಸುವ ಮೂಲಕ ಸ್ಕೋರ್ ಸಮವಾಗಿಸಿದರು.
ಆದರೆ ಮುಂದಿನ ಎಸೆತದಲ್ಲೇ ಅವರು ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಬಳಿಕ ಕ್ರೀಸ್‌ಗೆ ಬಂದ ಅರ್ಷದೀಪ್ ಸಿಂಗ್ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಔಟಾಗುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಟೈ ಮಾಡಿಕೊಂಡರೆ, ಸೋಲನ್ನು ತಪ್ಪಿಸಿಕೊಂಡ ಖುಷಿ ಶ್ರೀಲಂಕಾ ಪಾಳಯದಲ್ಲಿತ್ತು. ಸರಣಿಯ ಎರಡನೇ ಪಂದ್ಯ ಆಗಸ್ಟ್ 4ರಂದು ನಡೆಯಲಿದೆ.












Click it and Unblock the Notifications