India vs Pakistan: 2027 ವಿಶ್ವಕಪ್ ಟಿಕೆಟ್‌ಗೆ 12 ಕೋಟಿ ಅರ್ಜಿ.. ಫೈನಲ್ ದಾಖಲೆ ಮುರಿದ ಭಾರತ-ಪಾಕ್ ಪಂದ್ಯ..
India vs Pakistan: 2027ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಟಿಕೆಟ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ. ಬರೋಬ್ಬರಿ 24 ವರ್ಷಗಳ ನಂತರ ಆಫ್ರಿಕಾ ಖಂಡದ ದೇಶಗಳು ಈ ಹೈವೋಲ್ಟೇಜ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.
ಅಂತಾರಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನವೆಂಬರ್ 1, 2026ರವರೆಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ವಿವಿಧ ಪಂದ್ಯಗಳ ಟಿಕೆಟ್‌ಗಳಿಗಾಗಿ ಒಟ್ಟು 12,08,09,467 (12 ಕೋಟಿಗೂ ಹೆಚ್ಚು) ಮುಂಗಡ ಅರ್ಜಿಗಳು ಸಲ್ಲಿಕೆಯಾಗಿವೆ.

3.25 ಕೋಟಿ ದಾಟಿದ ನೋಂದಣಿಗಳ ಸಂಖ್ಯೆ
ಈ ವಿಶ್ವಕಪ್ ಟಿಕೆಟ್‌ಗಾಗಿ ವಿಶ್ವದ 193 ದೇಶಗಳಿಂದ ಸುಮಾರು 28 ಲಕ್ಷ ಅಭಿಮಾನಿಗಳು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ಬೇರೆ ಬೇರೆ ಪಂದ್ಯಗಳಿಗಾಗಿ ಸಲ್ಲಿಕೆಯಾಗಿರುವ ಒಟ್ಟು ನೋಂದಣಿಗಳ ಸಂಖ್ಯೆ 3.25 ಕೋಟಿ ದಾಟಿದ್ದು, ಟೂರ್ನಿಯ ಜನಪ್ರಿಯತೆಯನ್ನು ಎತ್ತಿಹಿಡಿದಿದೆ.
ದಕ್ಷಿಣ ಆಫ್ರಿಕಾ, ಯುನೈಟೆಡ್ ಕಿಂಗ್‌ಡಮ್ (ಯುಕೆ), ಭಾರತ, ಅಮೆರಿಕ (ಯುಎಸ್‌ಎ) ಮತ್ತು ಆಸ್ಟ್ರೇಲಿಯಾದಿಂದ ಗರಿಷ್ಠ ಸಂಖ್ಯೆಯ ಅರ್ಜಿಗಳು ಬಂದಿವೆ. ಆಫ್ರಿಕಾ ಖಂಡದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ದೇಶಗಳಿಂದಲೇ 1.49 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.
ಭಾರತ vs ಪಾಕಿಸ್ತಾನ್ ಪಂದ್ಯಕ್ಕೇ ಭಾರಿ ಕ್ರೇಜ್..
ವಿಶ್ವ ಕ್ರಿಕೆಟ್‌ನ ಅತ್ಯಂತ ರೋಚಕ ಸಮರ ಎನಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ್ ನಡುವಿನ ಲೀಗ್ ಹಂತದ ಪಂದ್ಯಕ್ಕೆ ಅತ್ಯಂತ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್ 10, 2027ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಸಮರಕ್ಕಾಗಿ 83,97,294 (ಬರೋಬ್ಬರಿ 83.9 ಲಕ್ಷ) ಟಿಕೆಟ್ ಅರ್ಜಿಗಳು ಬಂದಿವೆ.
ಅದರಲ್ಲೂ ನವೆಂಬರ್ 21, 2027ರಂದು ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ 79,00,944 ಅರ್ಜಿಗಳು ಸಲ್ಲಿಕೆಯಾಗಿದ್ದು, ಫೈನಲ್‌ಗಿಂತಲೂ ಭಾರತ-ಪಾಕಿಸ್ತಾನ ನಡುವಿನ ಪಂದ್ಯವೇ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವುದು ವಿಶೇಷತೆಯಾಗಿದೆ ಎನ್ನಬಹುದು.
ಸಂತಸ ವ್ಯಕ್ತಪಡಿಸಿದ ಐಸಿಸಿ
ದಕ್ಷಿಣ ಆಫ್ರಿಕಾದ 8 ಕ್ರೀಡಾಂಗಣಗಳಲ್ಲಿ ನಡೆಯಲಿರುವ 41 ಪಂದ್ಯಗಳಿಗೆ ಒಟ್ಟು 10.5 ಕೋಟಿ ಅರ್ಜಿಗಳು ಬಂದಿವೆ. ಆತಿಥೇಯ ದಕ್ಷಿಣ ಆಫ್ರಿಕಾ ಆಡುವ ಪಂದ್ಯಗಳಿಗೆ 2.6 ಕೋಟಿ ಹಾಗೂ ಜಿಂಬಾಬ್ವೆ ಆಡುವ ಪಂದ್ಯಗಳಿಗೆ 1.33 ಕೋಟಿ ಅರ್ಜಿಗಳು ಬಂದಿವೆ. ಇನ್ನು ಅಕ್ಟೋಬರ್ 24, 2027ರಂದು ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯಲಿರುವ ಪಂದ್ಯಕ್ಕೆ 33 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಈ ಅಭೂತಪೂರ್ವ ಸ್ಪಂದನೆಗೆ ಐಸಿಸಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, 'ಆಫ್ರಿಕಾ ನೆಲದಲ್ಲಿ ಎರಡು ದಶಕಗಳ ಬಳಿಕ ನಡೆಯುತ್ತಿರುವ ಈ ಟೂರ್ನಿ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕೂಟವಾಗಲಿದೆ,' ಎಂದು ಹೇಳಿದ್ದಾರೆ.
ಟಿಕೆಟ್ ಪಡೆಯುವುದು ಹೇಗೆ?
ಅಭಿಮಾನಿಗಳು ಉಚಿತವಾಗಿ ಅರ್ಜಿ ಸಲ್ಲಿಸಲು ನವೆಂಬರ್ 21, 2026ರ ವರೆಗೆ ಕಾಲಾವಕಾಶವಿದೆ. ಐಸಿಸಿಯ ಅಧಿಕೃತ ವೆಬ್‌ಸೈಟ್ (tickets.cricketworldcup.com) ಮೂಲಕ ಆಸಕ್ತರು ತಮಗಿಷ್ಟವಾದ ಪಂದ್ಯಗಳಿಗೆ ನೋಂದಾಯಿಸಿಕೊಳ್ಳಬಹುದು. ಸಂಪೂರ್ಣವಾಗಿ ಲಾಟರಿ/ಬ್ಯಾಲೆಟ್ ಪ್ರಕ್ರಿಯೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆ ಆದವರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ.
ಇದೀಗ ಐಸಿಸಿ ಪ್ರಕಟಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಪಡೆದ ಗುಂಪು ಹಂತದ ಪಂದ್ಯ ಎಂಬ ಸಾರ್ವಕಾಲಿಕ ದಾಖಲೆಗೆ ಭಾರತ-ಪಾಕಿಸ್ತಾನ್ ಪಂದ್ಯ ಭಾಜನವಾಗಿದೆ. ಅಕ್ಟೋಬರ್ 10, 2027 ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ವಾಂಡರರ್ಸ್ ಕ್ರೀಡಾಂಗಣದಲ್ಲಿ ಈ ಜಿದ್ದಾಜಿದ್ದಿನ ಪಂದ್ಯ ಜರುಗಲಿದೆ. ಪಂದ್ಯಕ್ಕೆ ಹಲವು ಇನ್ನು ತಿಂಗಳುಗಳು ಬಾಕಿ ಇರುವಾಗಲೇ ಟಿಕೆಟ್ ಬೇಡಿಕೆಯು ಇಷ್ಟೊಂದು ಗಗನಕ್ಕೇರಿರುವುದು ಕ್ರೀಡಾ ಲೋಕವನ್ನು ಬೆರಗುಗೊಳಿಸಿದೆ.
ಕೋಟ್ಯಂತರ ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬೀಳುತ್ತಿದ್ದರೆ, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಅಂಗಳದ ಒಟ್ಟು ಆಸನ ಸಾಮರ್ಥ್ಯ ಕೇವಲ 34,000 ಮಾತ್ರ ಇರುವುದು ಆಯೋಜಕರಿಗೆ ಸವಾಲಾಗಿ ಪರಿಣಮಿಸಿದೆ. ಅಂದರೆ ಲಭ್ಯವಿರುವ ಪ್ರತಿಯೊಂದು ಸೀಟಿಗೂ ನೂರಾರು ಅಭಿಮಾನಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
2027ರ ವಿಶ್ವಕಪ್ ಪ್ರಮುಖ ದಿನಾಂಕಗಳು
* ಅಕ್ಟೋಬರ್ 2, 2027: ಏಕದಿನ ವಿಶ್ವಕಪ್ ಶುರು
* ಅಕ್ಟೋಬರ್ 10, 2027: ಭಾರತ vs ಪಾಕಿಸ್ತಾನ ಪಂದ್ಯ
* ನವೆಂಬರ್ 21, 2027: ಏಕದಿನ ವಿಶ್ವಕಪ್ ಫೈನಲ್ ಪಂದ್ಯ
ಒಟ್ಟಿನಲ್ಲಿ ಹೇಳುವುದಾದರೆ 2027ರ ವಿಶ್ವಕಪ್‌ಗೆ ಇನ್ನು ತುಂಬಾ ಸಮಯ ಇದ್ದರೂ, ಭಾರತ-ಪಾಕಿಸ್ತಾನ ನಡುವಿನ ಈ ಜಿದ್ದಾಜಿದ್ದಿನ ಸಮರ ಈಗಾಗಲೇ ಹೊಸ ದಾಖಲೆ ಬರೆದಿದೆ. ವಾಂಡರರ್ಸ್ ಅಂಗಳದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಕದನಕ್ಕಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications
