India vs New Zealand: ಬೆಂಗಳೂರು ಟೆಸ್ಟ್ ಪಂದ್ಯಕ್ಕೆ ಮೊದಲ ಎರಡು ದಿನ ಮಳೆ ಭೀತಿ
ಬೆಂಗಳೂರು ಎರಡು ದಿನಗಳಿಂದ ಫುಲ್ ಕೂಲ್ ಕೂಲ್ ಆಗಿದೆ. ಆಗ್ನೇಯ ಬಂಗಾಳ ಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಕೂಡ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಎರಡು ದಿನಗಳಿಂದ ಬೆಂಗಳೂರಿಗರು ಸೂರ್ಯನ ದರ್ಶನ ಮಾಡಿಲ್ಲ. ಮಳೆ ಭೀತಿ ನಡುವೆಯೇ ಬುಧವಾರದಿಂದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.
ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಎರಡು ದಿನಗಳ ಆಟ ನಡೆಯುವುದು ಅನುಮಾನವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೈದಾನ ಬೇಗನೆ ಒಣಗಲು ಅನುಕೂಲ ಇರುವುದರಿಂದ ಮಳೆ ಬಿಟ್ಟರೆ ಬೇಗನೆ ಪಂದ್ಯ ಆರಂಭವಾಗುವ ಭರವಸೆ ಕೂಡ ಇದೆ.

ಮಂಗಳವಾರ ಬೆಳಗ್ಗೆಯಿಂದಲೇ ಮಳೆ ಶುರುವಾದ ಕಾರಣ ಆಟಗಾರರು ಹೋಟೆಲ್‌ನಲ್ಲೇ ಉಳಿದಿದ್ದರು. ಸೋಮವಾರ ಮಳೆಯಿಂದಾಗಿ ಒಳಾಂಗಣದಲ್ಲೇ ಆಟಗಾರರು ಅಭ್ಯಾಸ ಮಾಡಿದರು. ಮಧ್ಯಾಹ್ನದ ಬಳಿಕ ಭಾರತ ತಂಡದ ಆಟಗಾರರು ಕೆಲ ಸಮಯ ಅಭ್ಯಾಸ ನಡೆಸಿದ್ದಾರೆ.
ಹವಾಮಾನ ಮುನ್ಸೂಚನೆ ಏನಿದೆ?
ಪಂದ್ಯದ ಐದು ದಿನ ಕೂಡ ಮಳೆಯಾಗುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಮೊದಲ ಎರಡು ದಿನ 60 ಪ್ರತಿಶತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೂರನೇ ದಿನ ಮಳೆ ಸುರಿಯುವ ಸಾಧ್ಯತೆ 40% ರಷ್ಟಿದೆ. ನಂತರ ಕೊನೆಯ ಎರಡು ದಿನ ಮಳೆಯ ಸಾಧ್ಯತೆ 25% ಗೆ ಕಡಿಮೆಯಾಗಲಿದೆ.
ಮೊದಲ ಎರಡು ದಿನ ಪೂರ್ತಿ ದಿನದಾಟ ರದ್ದಾಗುವ ಸಾಧ್ಯತೆ ಕೂಡ ಕಡಿಮೆ ಇದೆ. ಮಳೆ ಸಂಪೂರ್ಣವಾಗಿ ನಿಂತರೆ 30-45 ನಿಮಿಷಗಳ ಒಳಗೆ ಇಡೀ ಮೈದಾನ ಒಣಗಿಸುವ ತಂತ್ರಜ್ಞಾನ ಇರುವುದರಿಂದ, ಕೆಲ ಓವರ್ ಗಳ ಆಟವನ್ನು ನಿರೀಕ್ಷೆ ಮಾಡಬಹುದು.
ಮಳೆ ಅಡ್ಡಿಪಡಿಸದೆ ಇದ್ದರ ಬುಧವಾರ ಬೆಳಗ್ಗೆ 9.30ರಿಂದ ಪಂದ್ಯ ಆರಂಭವಾಗಲಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತಕ್ಕೆ ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಳ್ಳಬೇಕಿದೆ. ಶ್ರೀಲಂಕಾ ವಿರುದ್ದ 2 ಟೆಸ್ಟ್ ಪಂದ್ಯಗಳನ್ನು ಸೋತಿರುವ ನ್ಯೂಜಿಲೆಂಡ್ ಭಾರತದ ವಿರುದ್ಧ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.












Click it and Unblock the Notifications