32.. 30.. ಜಪಾನ್ ವಿರುದ್ಧದ ಪಂದ್ಯದಲ್ಲಿ ಗೆದ್ದು ವಿಶ್ವ ದಾಖಲೆ ಬರೆದರೂ ಟೀಮ್ ಇಂಡಿಯಾಗೆ ಭಾರಿ ಮುಖಭಂಗ
India Vs Japan: ಜಪಾನ್‌ನ ಸಾನೋ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐತಿಹಾಸಿಕ ಏಕೈಕ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಜಪಾನ್ ವಿರುದ್ಧ 2 ರನ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ 200 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ತಂಡ ಎಂಬ ಹೊಸ ದಾಖಲೆಯನ್ನು ಬರೆದಿದೆ. ಜೊತೆಗೆ ಭಾರಿ ಮುಖಭಂಗವನ್ನು ಕೂಡ ಟೀಮ್ ಇಂಡಿಯಾ ಅನುಭವಿಸಿದೆ.
ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಗಿದ್ದು, 5 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡಕ್ಕೆ ಜಪಾನ್ ಸ್ಪಿನ್ನರ್‌ಗಳು ಆಘಾತ ನೀಡಿದರು. ಸ್ಟಾರ್ ಬ್ಯಾಟರ್‌ಗಳು ಎಸಿನಿಕೊಂಡವರೇ ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ.

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್‌ಗಳೇ ಫ್ಲಾಪ್
ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಶೂನ್ಯಕ್ಕೆ (ಗೋಲ್ಡನ್ ಡಕ್) ಔಟಾದರೆ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಪಿಚ್ ಸ್ಪಿನ್ ಬೌಲಿಂಗ್‌ಗೆ ನೆರವಾಗಿದ್ದರಿಂದ ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ನಾಯಕ ಶ್ರೇಯಸ್ ಅಯ್ಯರ್ ಗಳಿಸಿದ 16 ರನ್‌ಗಳ ನೆರವಿನಿಂದ ಭಾರತ ತಂಡ 5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 32 ರನ್‌ಗಳನ್ನು ಪೇರಿಸಿತು.
ಜಪಾನ್‌ಗೆ ಕಾಡಿದ ಭಾರತೀಯ ಸ್ಪಿನ್ನರ್‌ಗಳು
ಟೀಮ್ ಇಂಡಿಯಾ ನೀಡಿದ 33 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಪಾನ್‌ಗೆ ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ, ಟೀಮ್ ಇಂಡಿಯಾ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯ್ ಅವರ ಮಾರಕ ಬೌಲಿಂಗ್ ದಾಳಿ ನಡೆಸಿ ಜಪಾನ್ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.
ಪಂದ್ಯದ ಕೊನೆಯ ಓವರ್ ಅನ್ನು ಅಕ್ಷರ್ ಪಟೇಲ್ ಎಸೆದರು. ಆಗ ಜಪಾನ್‌ಗೆ ಗೆಲ್ಲಲು 8 ರನ್‌ಗಳ ಅಗತ್ಯವಿತ್ತು. ಅದೇ ಓವರ್‌ನ ಮಧ್ಯದಲ್ಲಿ ಜಪಾನ್ ಬ್ಯಾಟರ್ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದಾಗ ಚೆಂಡು ಲೆಗ್ ಸೈಡ್‌ಗೆ ಹೋಯಿತು. ಅಂಪೈರ್ ಮೊದಲು ಅದನ್ನು 'ವೈಡ್' ಎಂದು ಘೋಷಿಸಿದರು.
ಇದನ್ನು ಭಾರತೀಯ ಆಟಗಾರರು ಅಪೀಲ್ ಮಾಡಿದ ನಂತರ, ನಾಯಕ ಶ್ರೇಯಸ್ ಅಯ್ಯರ್ ಅಂಪೈರ್ ಅವರೊಂದಿಗೆ ಮಾತುಕತೆ ನಡೆಸಿದರು. ಅಂತಿಮವಾಗಿ ಇಬ್ಬರೂ ಅಂಪೈರ್‌ಗಳು ಚರ್ಚಿಸಿ ತಮ್ಮ ನಿರ್ಧಾರವನ್ನು ಹಿಂಪಡೆದು, ಅದನ್ನು 'ವೈಡ್ ಅಲ್ಲ' ಎಂದು ಪ್ರಕಟಿಸಿದರು. ಕೊನೆಯಲ್ಲಿ ಜಪಾನ್ 5 ಓವರ್‌ಗಳಲ್ಲಿ 30 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿ, 2 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ವಿಶ್ವ ದಾಖಲೆ ನಡುವೆಯೂ ಟೀಮ್ ಇಂಡಿಯಾಗೆ ಮುಖಭಂಗ
ಈ ಗೆಲುವಿನೊಂದಿಗೆ ಭಾರತವು ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಸೂಪರ್ ಓವರ್ ಗೆಲುವುಗಳನ್ನು ಸೇರಿಸಿ) 200ನೇ ಜಯ ಪೂರೈಸಿದ ಮೊದಲ ತಂಡವಾಯಿತು. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಗೆಲುವು ದಾಖಲಿಸಿದ್ದ ಭಾರತ, ಇದೀಗ ಜಪಾನ್ ವಿರುದ್ಧ ತನ್ನ 200ನೇ ಗೆಲುವು ಸಾಧಿಸಿ ಸಂಭ್ರಮಿಸಿದೆ. ಆದರೂ ಇಂದಿನ ಪಂದ್ಯದಲ್ಲಿ ಒಂದು ಪುಟ್ಟ ರಾಷ್ಟ್ರ ಜಪಾನ್ ವಿರುದ್ಧ ಕಡಿಮೆ ಅಂತರದಿಂದ ಗೆದ್ದಿದ್ದು ಟೀಮ್ ಇಂಡಿಯಾಗೆ ಭಾರಿ ಮುಖಭಂಗವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರತೀಯ ಬ್ಯಾಟರ್ ಹಾಗೂ ಬೌಲರ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 'ಹೊಸ ರಾಷ್ಟ್ರದ ವಿರುದ್ಧ ಅನುಭವಿ ಆಟಗಾರರು ಇಷ್ಟು ನೀರಸ ಪ್ರದರ್ಶನ ತೋರಿದ್ದು ನಿಜಕ್ಕೂ ಅವಮಾನಕರ ಸಂಗತಿ,' ಎಂದು ಕಿಡಿಕಾರುತ್ತಿದ್ದಾರೆ. ಇನ್ನೂ ಕೆಲವರು 'ನಮ್ಮ ತಂಡದ ಸ್ಟಾರ್ ಬ್ಯಾಟರ್‌ಗಳು ಎನಿಸಿಕೊಂಡವರು ರನ್ ಕದಿಯಲು ಹೆಣಗಾಡಿದರು. ಬಲಿಷ್ಠ ತಂಡದ ವಿರುದ್ಧ 30 ರನ್ ಗಳಿಸಿದ ಜಪಾನ್ ಬ್ಯಾಟರ್‌ಗಳೇ ಎಷ್ಟೋ ವಾಸಿ,' ಎಂದು ಎಂದು ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications
