India VS Zimbabwe: ಭಾರತ ತಂಡದ ಸೇಡು ಕಂಪ್ಲೀಟ್, ಜಿಂಬಾಬ್ವೆ ವಿರುದ್ಧ 234 ರನ್ ಚಚ್ಚಿದ ಭಾರತ ತಂಡ!
ಭಾರತ ಕ್ರಿಕೆಟ್ ತಂಡ ಇದೀಗ ಜಿಂಬಾಬ್ವೆ ವಿರುದ್ಧ ಸೇಡಿನ ಪಂದ್ಯ ಆಡಿದ್ದು, ನಿನ್ನೆ ಹೀನಾಯ ಸೋಲು ಕಂಡ ನಂತರ ಇದೀಗ ಕೇವಲ 20 ಓವರ್‌ನಲ್ಲಿ 234 ರನ್ ಚಚ್ಚಿ ಬಿಸಾಡಿದೆ. ಅರೆ ಹಾಗಾದ್ರೆ ಭಾರತ ತಂಡದ ಪರವಾಗಿ ಯಾರು ಅತಿಹೆಚ್ಚು ರನ್ ಗಳಿಸಿದರು? ಶುಭಮನ್ ಗಿಲ್ ಕೊಡುಗೆ ಏನು? ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ತಂಡದ ಕೀರ್ತಿ ಜಗತ್ತಿನಾದ್ಯಂತ ಹಬ್ಬಿದೆ. ಆದರೂ, ಟಿ20 ವಿಶ್ವಕಪ್ ಮುಗಿದ ನಂತರ ಮೊದಲ ಪಂದ್ಯದಲ್ಲೇ ಭಾರತ ತಂಡ ದುರ್ಬಲ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡಿತ್ತು. ನಿನ್ನೆ ಅಂದ್ರೆ ಶನಿವಾರ ನಡೆದ ಭಾರತ & ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಭಾರತ ಕೇವಲ 115 ರನ್‌ಗಳನ್ನು ಮುಟ್ಟಲು ಆಗದೆ 102 ರನ್‌ಗಳಿಗೆ ಆಲೌಟ್ ಆಗಿತ್ತು. ಹೀಗಿದ್ದಾಗ ಇಂದು ಆ ಸೇಡಿಗೆ ಸೇಡು ತೀರಿಸಿಕೊಂಡಿರುವ ಭಾರತ ತಂಡದ ಯುವ ಆಟಗಾರರು, ಕೇವಲ 20 ಓವರ್‌ನಲ್ಲಿ 234 ರನ್ ಚಚ್ಚಿ ಬಿಸಾಡಿದ್ದಾರೆ. ಈ ಮೂಲಕ ಜಿಂಬಾಬ್ವೆ ಬೌಲರ್‌ಗಳಿಗೆ ಚಳಿ ಬಿಡಿಸಿದ್ದಾರೆ.

ಹರಾರೆಯಲ್ಲಿ ಜಿಂಬಾಬ್ವೆ ಹರೋಹರ!
ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗೆ ಕೈಗೆ ಬ್ಯಾಟ್ ಸಿಕ್ಕ ತಕ್ಷಣ ನಿನ್ನೆಯ ಕೋಪವನ್ನು ತೀರಿಸಿಕೊಂಡ ಭಾರತ ತಂಡದ ದಾಂಡಿಗರು, ಮನಸ್ಸಿಗೆ ಬಂದಂತೆ ಬೀಸ ತೊಡಗಿದರು. ಆದರೆ ಆರಂಭದಲ್ಲೇ ಶುಭಮನ್ ಗಿಲ್ ಮತ್ತೊಮ್ಮೆ ತಮ್ಮ ಹೀನಾಯ ಬ್ಯಾಟಿಂಗ್ ಮುಂದುವರಿಸಿ, ಕೇವಲ 2 ರನ್‌ಗೆ ಔಟ್ ಆಗಿ ಪೆವಿಲಿಯನ್ ಗೂಡು ಸೇರಿದರು. ಆ ನಂತರವೇ ನೋಡಿ ಜಿಂಬಾಬ್ವೆ ವಿರುದ್ಧ ಜಾದೂ ನಡೆದಿತ್ತು. ಆಗ ಅಭಿಷೇಕ್ ಶರ್ಮಾ & ರುತುರಾಜ್ ಗಾಯಕ್ವಾಡ್ ಜೋಡಿ ಭರ್ಜರಿ ಬ್ಯಾಟಿಂಗ್ ಶುರು ಮಾಡಿ ಬೆಂಡೆತ್ತಲು ಆರಂಭಿಸಿತ್ತು.
ಹೀನಾಯ ಸೋಲು ಗ್ಯಾರಂಟಿ ಗುರೂ!
ಅಭಿಷೇಕ್ ಶರ್ಮಾ 47 ಬಾಲ್ ಎದುರಿಸಿ 7 ಬೌಂಡರಿ ಹಾಗೂ 8 ಸಿಕ್ಸರ್ ಬಾರಿಸಿ ಸರಿಯಾಗಿ 100 ರನ್ ಸಿಡಿಸಿ ಔಟ್ ಆದರು. ಹಾಗೇ ರುತುರಾಜ್ ಗಾಯಕ್ವಾಡ್ 1 ಸಿಕ್ಸರ್ 11 ಬೌಂಡರಿ ಸೇರಿ ಕೇವಲ 47 ಬಾಲ್ ಆಡಿ ಬರೋಬ್ಬರಿ 77 ರನ್ ಗಳಿಸಿದರು. ಕೊನೆಯಲ್ಲಿ ಬಂದ ರಿಂಕು ಸಿಂಗ್ ನಿನ್ನೆ ಡಕ್ ಔಟ್ ಆಗಿದ್ದ ಸೇಡನ್ನು ಇಂದು ಜಿಂಬಾಬ್ವೆ ವಿರುದ್ಧ ತೀರಿಸಿಕೊಂಡರು. ಹೀಗೆ ಕೇವಲ 22 ಬಾಲ್ ಆಡಿದ ರಿಂಕು ಸಿಂಗ್ 5 ಸಿಕ್ಸರ್ ಸೇರಿ ಒಟ್ಟಾರೆ 48 ರನ್ ಚಚ್ಚಿದರು. ಈ ಮೂಲಕ ಭಾರತ ತಂಡ 20 ಓವರ್‌ನಲ್ಲಿ 234 ರನ್ ಚಚ್ಚಿದ್ದು, ಜಿಂಬಾಬ್ವೆ ತಂಡಕ್ಕೆ ಈಗ 235 ರನ್‌ಗಳ ಗುರಿ ನೀಡಿದೆ.












Click it and Unblock the Notifications