India vs Australia: ಆಸ್ಟ್ರೇಲಿಯಾ ವಿರುದ್ಧ ಸೋಲು; ಪಾಕ್ ಕೈಯಲ್ಲಿ ಭಾರತದ ಸೆಮಿಫೈನಲ್ ಭವಿಷ್ಯ
ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲು ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬೇಕಿದ್ದ ಪಂದ್ಯದಲ್ಲಿ ಭಾರತ 9 ರನ್‌ಗಳಿಂದ ಸೋಲು ಕಂಡಿದೆ. ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ಸತತ 9ನೇ ಬಾರಿ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಭಾರತದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದರೆ, ಭಾರತ 20 ಓವರ್ ಗಳಲ್ಲಿ 142 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಬೌಲರ್ ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 151 ರನ್ ಕಲೆ ಹಾಕಿತು. ಬೆತ್ ಮೂನಿ 2 ರನ್ ಗಳಿಸಿ ಔಟಾದರೂ, ಎಲ್ಲಿಸ್ ಪೆರ್‍ರಿ, ಗ್ರೇಸ್ ಹ್ಯಾರಿಸ್, ತಹ್ಲಿಯಾ ಮೆಕ್‌ಗ್ರಾತ್ ತಂಡಕ್ಕೆ ಆಸರೆಯಾದರು.

ಗ್ರೇಸ್ ಹ್ಯಾರಿಸ್ 41 ಎಸೆತಗಳಲ್ಲಿ 40 ರನ್ ರನ್ ಗಳಿಸಿದರೆ, ತಹ್ಲಿಯಾ ಮೆಕ್‌ಗ್ರಾತ್ 26 ಎಸೆತಗಳಲ್ಲಿ 32 ರನ್ ಗಳಿಸಿದರು. ಎಲ್ಲಿಸ್ ಪೆರ್‍ರಿ 23 ಎಸೆತಗಳಲ್ಲಿ 32 ರನ್ ಗಳಿಸಿದರು. ಭಾರತದ ಪರವಾಗಿ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
152 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಭಾರತ ಆಸ್ಟ್ರೇಲಿಯಾದ ಬಿಗಿ ಬೌಲಿಂಗ್ ದಾಳಿ ಮುಂದೆ ರನ್ ಗಳಿಸಲು ಪರದಾಡಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮಾತ್ರ 13 ಎಸೆತಗಳಲ್ಲಿ 20 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು, ದೊಡ್ಡ ಮೊತ್ತ ಗಳಿಸಲುವಲ್ಲಿ ವಿಫಲವಾದರು. ಸ್ಮೃತಿ ಮಂಧಾನ 12 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು.
ಜೆಮಿಮಾ ರೋಡ್ರಿಗಸ್ 12 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ದೀಪ್ತಿ ಶರ್ಮಾ 25 ಎಸೆತಗಳಲ್ಲಿ 29 ರನ್ ಗಳಿಸಿದ್ದಾಗ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಜಾರ್ಜಿಯಾಗೆ ಕ್ಯಾಚ್ ಕೊಟ್ಟು ಔಟಾದರು. ರಿಚಾ ಘೋಷ್ ಇಲ್ಲದ ರನ್ ಕದಿಯಲು ಹೋಗಿ 1 ರನ್ ಗಳಿಸಿದ್ದಾಗಲೇ ರನೌಟ್ ಆದರು.
ಹರ್ಮನ್‌ಪ್ರೀತ್ ಕೌರ್ ಹೋರಾಟ ವ್ಯರ್ಥ
ನಾಯಕಿ ಹರ್ಮನ್ ಪ್ರೀತ್ ಕೌರ್ 47 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರೂ ಭಾರತದ ಸೋಲು ತಪ್ಪಿಸಲು ಆಗಲಿಲ್ಲ. ಪೂಜಾ ವಸ್ತ್ರಾಕರ್ 6 ಎಸೆತಗಳಲ್ಲಿ 9 ರನ್ ಗಳಿಸಿದರೆ, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಯಾವುದೇ ರನ್ ಗಳಿಸದೆ ಔಟಾದರು.
ಈ ಸೋಲಿನ ಮೂಲಕ ಭಾರತದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಈ ಪಂದ್ಯ ಸೋತರು ರನ್ ರೇಟ್ ಆಧಾರದ ಮೇಲೆ ಭಾರತ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಸದ್ಯ ಮೂರನೇ ಸ್ಥಾನದಲ್ಲಿದ್ದು, ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಒಂದು ವೇಳೆ ಪಾಕಿಸ್ತಾನ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ, ನ್ಯೂಜಿಲೆಂಡ್ ಏನಾದರೂ ಪಂದ್ಯ ಗೆದ್ದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದ್ದು, ಭಾರತದ ಟಿ20 ವಿಶ್ವಕಪ್ ಪ್ರಯಾಣ ಮುಕ್ತಾಯವಾಗಲಿದೆ.












Click it and Unblock the Notifications