WTC Points Table: ಐದನೇ ಟೆಸ್ಟ್‌ಗೂ ಮುನ್ನವೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಭಾರತ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ 3-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. 5ನೇ ಟೆಸ್ಟ್ ಮಾರ್ಚ್ 7ರಂದು ಧರ್ಮಶಾಲಾದಲ್ಲಿ ಆರಂಭವಾಗಲಿದೆ.
5ನೇ ಟೆಸ್ಟ್ ಪಂದ್ಯಕ್ಕೆ ಮುನ್ನವೇ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Points Table) ನಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟಕ್ಕೂ ಧರ್ಮಶಾಲಾ ಪಂದ್ಯಕ್ಕೆ ಮುನ್ನವೇ ಭಾರತ ಮೊದಲ ಸ್ಥಾನಕ್ಕೇರಲು ಆಸ್ಟ್ರೇಲಿಯಾ ತಂಡ ಕಾರಣವಾಗಿದೆ.

ಈವರೆಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಸೋತ ಬಳಿಕ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಮೊದಲ ಸ್ಥಾನಕ್ಕೇರಿದೆ. ನ್ಯೂಜಿಲೆಂಡ್ ವಿರುದ್ಧ ಗೆದ್ದ ಬಳಿಕವೂ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
ಪಿಸಿಟಿ ಅಂಕಪಟ್ಟಿ ಹೇಗಿದೆ?
ಇಂಗ್ಲೆಂಡ್ ವಿರುದ್ದದ ಸರಣಿಯ ನಾಲ್ಕನೇ ಪಂದ್ಯ ಗೆದ್ದ ಬಳಿಕ ಭಾರತ ಅಂಕಪಟ್ಟಿಯಲ್ಲಿ 64.58% ಪಿಸಿಟಿ (ಪಾಯಿಂಟ್ ಶೇಕಡಾವಾರು) ಯೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಆದರೆ 75% ಪಿಸಿಟಿ ಹೊಂದಿದ್ದ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ 60 % ಪಿಸಿಟಿಯೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. 64.58% ಪಿಸಿಟಿ ಹೊಂದಿರುವ ಭಾರತ ಮೊದಲ ಸ್ಥಾನಕ್ಕೇರಿದೆ.
ಭಾರತ 2024-2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಭಾರತ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ನ್ಯೂಜಿಲೆಂಡ್ 5 ಟೆಸ್ಟ್ ಪಂದ್ಯಗಳನ್ನಾಡಿದ್ದು 3 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಆಸ್ಟ್ರೇಲಿಯಾ 11 ಪಂದ್ಯಗಳನ್ನಾಡಿದ್ದು 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 3 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 59.09% ಪಿಸಿಟಿಯೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
ಮಾರ್ಚ್ 7ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.
ಇಂಗ್ಲೆಂಡ್ 19.44% ಪಾಯಿಂಟ್-ಪರ್ಸೆಂಟೇಜ್‌ನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.











Click it and Unblock the Notifications