Ind vs NZ: ಭಾರತ ತಂಡಕ್ಕೆ ಆಘಾತ: ಇಬ್ಬರು ಪ್ರಮುಖ ಆಟಗಾರರು ಆಡೋದು ಅನುಮಾನ!
ಏಕದಿನ ವಿಶ್ವಕಪ್ 2023 ರ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಇದುವರೆಗೂ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ ಪ್ರವೇಶಿಸುವ ಸನಿಹದಲ್ಲಿದೆ. ಇಂದು (ಭಾನುವಾರ) ಧರ್ಮಶಾಲಾದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ನ್ಯೂಜಿಲೆಂಡ್ ಕೂಡ ಇದುವರೆಗೂ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು, ಉತ್ತಮ ಪ್ರದರ್ಶನ ನೀಡುತ್ತಿದೆ. ಐಸಿಸಿ ಪಂದ್ಯಾವಳಿಗಳಲ್ಲಿ ನ್ಯೂಜಿಲೆಂಡ್ ಎಂದಿಗೂ ಭಾರತಕ್ಕೆ ತಲೆನೋವಾಗಿದೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು.

ಪ್ರಮುಖ ಪಂದ್ಯಕ್ಕೆ ಮುನ್ನ ಭಾರತಕ್ಕೆ ಹೊಸ ತಲೆನೋವು ಎದುರಾಗಿದೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಕಾಲಿನ ಗಾಯಕ್ಕೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ, ಈಗ ಇನ್ನಿಬ್ಬರು ಪ್ರಮುಖ ಆಟಗಾರರು ಕೂಡ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅನುಮಾನ
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಶನಿವಾರ ಧರ್ಮಶಾಲಾದ ಹೆಚ್‌ಪಿಸಿಎ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುವ ವೇಳೆಯಲ್ಲಿ ಇಶಾನ್ ಕಿಶನ್ ಅವರಿಗೆ ಜೇನುನೊಣ ಕಚ್ಚಿದೆ. ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದ್ದರೂ, ಅವರು ಅಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಬ್ಯಾಟರ್ ಸೂರ್ಯಕುಮಾರ್ ಯಾದವ್ ನೆಟ್ ಸೆಷನ್ ವೇಳೆ ಬಲಗೈ ಮಣಿಕಟ್ಟಿಗೆ ಚೆಂಡು ಬಡಿದು ನೋವಿನಿಂದ ನರಳಿದರು. ಸೂರ್ಯಕುಮಾರ್ ಅವರು ನೋವಿನಿಂದ ಬಳಲುತ್ತಿರುವ ಚಿತ್ರಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಅಲಭ್ಯರಾದರೆ, ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದು ತಲೆನೋವಾಗಿದೆ. ಧರ್ಮಶಾಲಾದಂತಹ ಪಿಚ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರ, ಇಶಾನ್ ಕಿಶನ್ ಕೂಡ ಈಗಾಗಲೇ ವಿಶ್ವಕಪ್‌ನಲ್ಲಿ ಅರ್ಧಶತಕ ಬಾರಿಸಿ ಭರವಸೆ ತೋರಿಸಿದ್ದರು.
ಜಡೇಜಾಗೆ ಕೂಡ ಗಾಯದ ಸಮಸ್ಯೆ
ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯದ ಆತಂಕ ಎದುರಿಸುತ್ತಿದ್ದಾರೆ ಎಂದು ಬಿಸಿಸಿಐ ಅಧಿಕೃತ ಅಧಿಕಾರಿಯೊಬ್ಬರು ಖಚಿತಪಡಿಸಿರುವುದಾಗಿ ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ, ಆದರೂ, ಗಾಯವು ಗಂಭೀರವಾಗಿಲ್ಲ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುತ್ತಾರೆ ಎಂದು ಹೇಳಿದ್ದಾರೆ.
''ಜಡೇಜಾ ಚೆನ್ನಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದಾಗ ದೀರ್ಘಾವಧಿ ಆರೈಕೆಯ ಅಗತ್ಯ ಇರುತ್ತದೆ. ಮೊಣಕಾಲಿ ಗಾಯಗಳು ಮತ್ತೆ ನೋವು ಮಾಡುತ್ತವೆ. ಅದಕ್ಕಾಗಿ ಜಡೇಜಾ ಐಸ್‌ಪ್ಯಾಕ್ ಇಟ್ಟುಕೊಳ್ಳುತ್ತಿದ್ದರು. ವೈದ್ಯಕೀಯ ತಂಡ ಮತ್ತು ಫಿಸಿಯೋಗಳು ಜಡೇಜಾ ಸೇರಿದಂತೆ ಎಲ್ಲಾ ಆಟಗಾರರ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು" ಹೇಳಿದ್ದಾರೆ.
ಏಕದಿನ ವಿಶ್ವಕಪ್ ಲೀಗ್ ಹಂತದಲ್ಲಿ ಭಾರತ ಇನ್ನೂ 5 ಪಂದ್ಯಗಳನ್ನು ಆಡಬೇಕಿದೆ, ಭಾರತ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡ ನಂತರ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಸೇರಿದಂತೆ ಆಟಗಾರರು ದೊಡ್ಡ ಸೆಮಿಫೈನಲ್‌ಗೆ ಮೊದಲು ಆಯಾಸವನ್ನು ತಪ್ಪಿಸಲು ಕೆಲವು ಪಂದ್ಯಗಳಿಗೆ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.












Click it and Unblock the Notifications