IND vs ENG: ಭಾರತ ಫೈನಲ್ ಪ್ರವೇಶಿಸಲು ಕಾರಣವಾದ ಐದು ಅಂಶಗಳು: ಈ ಬಾರಿ ಕಪ್ ನಮ್ದೇ
ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ, ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಪಂದ್ಯದಲ್ಲಿ ರೋಹಿತ್ ಪಡೆ ಸೊಗಸಾದ ಸಂಘಟಿತ ಆಟದ ಪ್ರದರ್ಶನ ನೀಡಿ ಎಲ್ಲರ ಮನಸ್ಸು ಗೆದ್ದಿದೆ. ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು, ಎರಡನೇ ಬಾರಿ ಕಪ್ ಗೆಲ್ಲುವ ಕನಸು ಕಾಣುತ್ತಿದೆ.
ಈ ಗೆಲುವಿನ ಮೂಲಕ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ 2022ರ ಆಡಿಲೇಡ್‌ನಲ್ಲಿ ಕಂಡಿದ್ದ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ರೋಹಿತ್ ಪಡೆ ಟಿ20 ವಿಶ್ವಕಪ್‌ನಲ್ಲಿ ಅಜೇಯ ಓಟವನ್ನು ಮುಂದುವರೆಸಿದ್ದು, ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್ ಫೆವರೀಟ್ ತಂಡವಾಗಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬ್ಲ್ಯೂ ಬಾಯ್ಸ್, ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ.

ಟಾಸ್ ಸೋತರೂ ಮೊದಲು ಬ್ಯಾಟ್
ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಸಹ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದಿದ್ದು, ಗೆಲುವಿನಲ್ಲಿ ಎದ್ದು ಕಂಡಿತು. ವಾತಾವರಣದ ಲಾಭವನ್ನು ಪಡೆದ ಆಡಿದ ರೋಹಿತ್ ಪಡೆ ಅಬ್ಬರಿಸಿತು. ಇನ್ನು ಟಾಸ್ ಸೋತ ಬಳಿಕ ರೋಹಿತ್ ಸಹ ತಾವು ಸಹ ಟಾಸ್ ಗೆದ್ದಿದ್ದರೆ, ಬ್ಯಾಟಿಂಗ್ ಮಾಡುವುದಾಗಿಯೇ ಹೇಳಿದ್ದರು. ಏಕೆಂದರೆ, ಈ ಪಿಚ್‌ನಲ್ಲಿ ಚೇಸಿಂಗ್ ಕಷ್ಟ ಎಂದು ಅವರಿಗೂ ಅರಿವಿತ್ತು.
ಒತ್ತಡವನ್ನು ಮೆಟ್ಟಿನಿಂತ ರೋಹಿತ್
ಮಹತ್ವದ ಪಂದ್ಯಗಳಲ್ಲಿ ಹೇಗೆ ಆಡಬೇಕು ಎಂಬುದನ್ನು ಕರಗತ ಮಾಡಿಕೊಂಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೆಮೀಸ್ ಪಂದ್ಯದಲ್ಲಿ ಅಬ್ಬರಿಸಿದರು. ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 92 ರನ್ ಬಾರಿಸಿದ್ದ ಹಿಟ್ ಮ್ಯಾನ್, ಅದೇ ಶೈಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಬ್ಯಾಟ್ ಮಾಡಿದರು. ತಮ್ಮ ನೈಜ ಆಟವನ್ನು ಆಡಿದ ರೋಹಿತ್ ಸ್ಫೋಟಕ ಆಟವಾಡಿದರು. 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಶ್ರಮಿಸಿದರು.

ಜವಾಬ್ದಾರಿ ಅರಿತು ಆಡಿದ ಸ್ಟಾರ್ ಬ್ಯಾಟರ್ಸ್
ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಮಂಕಾಗಿ ಕಂಡು ಬಂದಿದ್ದ, ಸುರ್ಯಕುಮಾರ್ ಯಾದವ್ ಸೆಮಿಫೈನಲ್ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಬ್ಯಾಟ್ ಮಾಡಿದರು. ಅರ್ಧಶತಕ ಬಾರಿಸುವಲ್ಲಿ ವಿಫಲರಾಗಿರಬಹುದು, ಆದರೆ ತಂಡಕ್ಕೆ ಅಗತ್ಯವಿದ್ದ ರನ್‌ಗಳನ್ನು ಕಲೆ ಹಾಕಿ ನೆರವಾದರು. ಇನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಅವರ ಚಿಕ್ಕ ಚಿಕ್ಕ ಇನಿಂಗ್ಸ್‌ಗಳು ತಂಡಕ್ಕೆ ನೆರವಾದವು.
ಸ್ಪಿನ್ ಬೌಲರ್‌ಗಳ ಕರಾರುವಕ್ ದಾಳಿ
ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ ಬೌಲರ್‌ಗಳು ವಿಕೆಟ್ ಟು ವಿಕೆಟ್ ಬೌಲಿಂಗ್ ನಡೆಸಿದರು. ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಬೌಲರ್ಸ್ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದರು. ಆರಂಭದಲ್ಲಿ ಅಕ್ಷರ್ ಪಟೇಲ್ ಆಂಗ್ಲರ್ ಸದ್ದಡಗಿಸದರೆ, ಬಳಿಕ ಚೈನಾ ಮೆನ್ ಬೌಲರ್ ಕುಲ್‌ದೀಪ್ ಯಾದವ್ ಅಮೋಘ ದಾಳಿ ಸಂಘಟಿಸಿದರು. ಈ ಇಬ್ಬರೂ ಸ್ಪಿನ್ ಬೌಲರ್ಸ್ ತಲಾ ಮೂರು ವಿಕೆಟ್ ಕಬಳಿಸಿದರು.

ಫೀಲ್ಡರ್‌ಗಳು ಉತ್ತಮ ಫೀಲ್ಡಿಂಗ್
ಟೀಮ್ ಇಂಡಿಯಾದ ಫೀಲ್ಡರ್‌ಗಳು ಉತ್ತಮವಾದ ಫೀಲ್ಡಿಂಗ್ ಪ್ರದರ್ಶನ ನೀಡಿದರು. ಇದು ಇಂಗ್ಲೆಂಡ್ ಸೋಲಿಗೆ ಕಾರಣವಾಯಿತು. ಸರಿಯಾಗಿ ಕ್ಯಾಚ್‌ಗಳನ್ನು ಪಡೆದು, ಡೈರೆಕ್ಟ್ ಹಿಟ್ ಮಾಡುವ ಮೂಲಕ ರನೌಟ್ ಮಾಡಿ ಪಂದ್ಯ ಗೆಲ್ಲಲು ನೆರವಾದರು.












Click it and Unblock the Notifications