Ind vs Aus: ಪಂದ್ಯ ಗೆದ್ದರೂ ಭಾರತದ ಈ ಬ್ಯಾಟರ್ ವಿರುದ್ಧ ಕಿಡಿ ಕಾರಿದ ಯುವರಾಜ್ ಸಿಂಗ್
ಭಾನುವಾರ ಚೆನ್ನೈನ ಎಂಎ ಚಿದಂಬರಂ ಅಂಗಳದಲ್ಲಿ ನಡೆದ 2023 ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತದ ಸ್ಪಿನ್ ದಾಳಿಗೆ ಸಿಕ್ಕು 199 ರನ್‌ಗಳಿಗೆ ಆಲೌಟ್ ಆಯಿತು.
200 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 2 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾದ ಇಶಾನ್ ಕಿಶನ್, ರೋಹಿತ್ ಶರ್ಮಾ ಸೊನ್ನೆಗೆ ಔಟಾದರೆ, ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಸೊನ್ನೆಗೆ ಔಟಾದರು.

ಮೂವರು ಸೊನ್ನೆಗೆ ಔಟಾದ ನಂತರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಾಳ್ಮೆಯ ಬ್ಯಾಟಿಂಗ್ ಮಾಡುವ ಮೂಲಕ ಭಾರತವನ್ನು ಸೋಲಿನ ಸುಳಿಯಿಂದ ರಕ್ಷಿಸಿದರು. ವಿರಾಟ್ ಕೊಹ್ಲಿ ಒಂದು ಜೀವದಾನ ಪಡೆದರು, ನಂತರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ ಎಚ್ಚರಿಕೆಯಿಂದ ಯಾವ ತಪ್ಪಿಗೂ ಅವಕಾಶ ಕೊಡದೆ ರನ್ ಗಳಿಸಿದರು.
ಕೆಎಲ್ ರಾಹುಲ್ ಅಜೇಯ 97 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 85 ರನ್ ಗಳಿಸಿದರು. 4 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿದ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಉತ್ತಮವಾಗಿ ಆರಂಭಿಸಿದೆ.
ಶ್ರೇಯಸ್ ಅಯ್ಯರ್ ವಿರುದ್ಧ ಯುವರಾಜ್ ಕಿಡಿ
ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಸೊನ್ನೆಗೆ ಔಟಾದ ಬಳಿಕ ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ಕೆಟ್ಟ ಹೊಡೆತಕ್ಕೆ ಮುಂದಾಗುವ ಮೂಲಕ ಔಟಾದರು. ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡುತ್ತಿದ್ದ ಅಯ್ಯರ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅವರು ಬೇಗನೆ ಔಟಾಗಿದ್ದು ನಿರಾಸೆ ಮೂಡಿಸಿದೆ.
ಶ್ರೇಯಸ್ ಅಯ್ಯರ್ ಔಟಾದ ರೀತಿಗೆ ಯುವರಾಜ್ ಸಿಂಗ್ ಬೇಸರಗೊಂಡಿದ್ದಾರೆ. ಈ ಬಗ್ಗೆ ಎಕ್ಸ್ (ಟ್ವಿಟರ್) ನಲ್ಲಿ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. " ನಾಲ್ಕನೇ ಕ್ರಮಾಂಕದಲ್ಲಿ ಆಡುವ ಬ್ಯಾಟ್ಸ್‌ಮನ್‌ಗಳು ಒತ್ತಡವನ್ನು ನಿಭಾಯಿಸಬೇಕು, ತಂಡದ ಇನ್ನಿಂಗ್ಸ್ ಅನ್ನು ಮತ್ತೆ ನಿರ್ಮಾಣ ಮಾಡಲು ಪ್ರಯತ್ನ ಮಾಡುವಾಗಿ ಶ್ರೇಯಸ್ ಅವರು ಇನ್ನೂ ಉತ್ತಮವಾಗಿ ಚಿಂತಿಸಬೇಕಾದ ಅಗತ್ಯವಿದೆ! ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ ನಂತರ, ವಿರಾಟ್ ಕೊಹ್ಲಿ ಅವರಂತಹ ಆಟಗಾರನ ಕ್ಯಾಚ್ ಕೈಬಿಡುವುದು ಆಸ್ಟ್ರೇಲಿಯಾಗೆ ದುಬಾರಿಯಾಯಿತು. ಆತನ ಕ್ಯಾಚ್ ಬಿಟ್ಟರೆ ನಿಮ್ಮಿಂದ ಪಂದ್ಯವನ್ನು ಕಸಿದುಕೊಳ್ಳುತ್ತಾನೆ" ಎಂದು ಟ್ವೀಟ್ ಮಾಡಿದ್ದಾರೆ.
ಶ್ರೇಯಸ್ ಅವರ ಹೊಡೆತದ ಬಗ್ಗೆ ಯುವರಾಜ್ ಸಿಂಗ್ ಅತೃಪ್ತಿ ಹೊಂದಿದ್ದರೂ, ಕೆಎಲ್ ರಾಹುಲ್‌ರನ್ನು ಐದನೇ ಕ್ರಮಾಂಕಕ್ಕಿಂತ ನಾಲ್ಕನೇ ಸ್ಥಾನದಲ್ಲಿ ಕಳುಹಿಸದಿರುವ ತರ್ಕವನ್ನು ಅರ್ಥಮಾಡಿಕೊಳ್ಳಲು ವಿಫಲರಾದರು. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದರು ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೂ, 4ನೇ ಕ್ರಮಾಂಕದಲ್ಲಿ ಅಯ್ಯರ್ ಉತ್ತಮ ಪ್ರದರ್ಶನ ನೀಡಿರುವ ದಾಖಲೆ ಹೊಂದಿರುವ ಕಾರಣ ಅವರಿಗೆ ಅವಕಾಶ ನೀಡಲಾಯಿತು.












Click it and Unblock the Notifications