Rinku Singh: ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಸಿಕ್ಸರ್ ಬಾರಿಸಿದರು ತಂಡಕ್ಕೆ ಒಂದು ರನ್ ಸಿಕ್ಕಿದ್ದೇಕೆ?
ವಿಶ್ವಕಪ್ ಸೋಲಿನ ಬೇಸರದಲ್ಲಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗುರುವಾರ ಸ್ವಲ್ಪ ಸಮಾಧಾನ ಸಿಕ್ಕಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಯುವ ಪಡೆ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕುವ ಮೂಲಕ ಭಾರತಕ್ಕೆ ದೊಡ್ಡ ಸವಾಲು ನೀಡಿತು. ಜೋಶ್ ಇಂಗ್ಲಿಸ್ 50 ಎಸೆತಗಳಲ್ಲಿ 110 ರನ್ ಗಳಿಸಿ ಮಿಂಚಿದರು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಅದ್ಭುತ ಅರ್ಧಶತಕಗಳ ನೆರವಿನಿಂದ ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಆದರೂ ಇವರಿಬ್ಬರು ಔಟಾದ ನಂತರ ಆಸ್ಟ್ರೇಲಿಯಾ ಗೆಲುವಿನ ವಿಶ್ವಾಸದಲ್ಲಿತ್ತು.
ಕೊನೆಯ ಓವರ್‌ನಲ್ಲಿ ತಂಡಕ್ಕೆ 7 ರನ್‌ಗಳ ಅಗತ್ಯವಿದ್ದು, ಭಾರತದ ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂದು ಭಾವಿಸಲಾಗಿತ್ತು, ರಿಂಕು ಸಿಂಗ್ ಸೀನ್ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿದರು, ನಂತರ ಭಾರತಕ್ಕೆ 5 ಎಸೆತಗಳಲ್ಲಿ 3 ರನ್ ಬೇಕಿತ್ತು. ನಂತರ ಮುಂದಿನ ಎಸೆತ ವೈಡ್ ಆಯಿತು.
4 ಎಸೆತಗಳಲ್ಲಿ 2 ರನ್ ಅಗತ್ಯವಿದ್ದಾಗ ಅಕ್ಷರ್ ಪಟೇಲ್ ವಿಕೆಟ್ ಕಳೆದುಕೊಂಡರು, ನಂತರ ಬಂದ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ರನೌಟ್ ಆದರು. ಆದರೆ ರಿಂಕು ಸಿಂಗ್ ಸ್ಟ್ರೈಕ್‌ಗೆ ಬಂದಿದ್ದರು, ನಂತರ ಅರ್ಶದೀಪ್ ಸಿಂಗ್ ಬಂದರು, ರಿಂಕು ಸಿಂಗ್ ಮುಂದಿನ ಎಸೆತದಲ್ಲಿ ಎರಡು ರನ್ ಗಳಿಸುವ ಭರದಲ್ಲಿ ಅರ್ಷದೀಪ್ ಸಿಂಗ್ ರನೌಟ್ ಆದರು.
ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ ಕೇವಲ ಒಂದು ರನ್ ಬೇಕಿತ್ತು. ರಿಂಕು ಸಿಂಗ್ ಸ್ಟ್ರೈಕ್‌ನಲ್ಲಿ ಇದ್ದರು. ಎಲ್ಲಾ ಫೀಲ್ಡರ್ ಗಳು ಒಂದು ರನ್ ತಡೆದು ಪಂದ್ಯ ಡ್ರಾ ಮಾಡಿಕೊಳ್ಳಲು 30 ಯಾರ್ಡ್ ಗೆರೆಯೊಳಗೆ ನಿಂತಿದ್ದರು. ಆದರೆ ರಿಂಕು ಸಿಂಗ್ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು ಭಾರತ ತಂಡಕ್ಕೆ ಸಿಕ್ಕಿದ್ದು ಒಂದು ರನ್ ಮಾತ್ರ!
ಸಿಕ್ಸರ್ ಯಾಕೆ ಲೆಕ್ಕಕ್ಕಿಲ್ಲ?
ಕೊನೆಯ ಎಸೆತದಲ್ಲಿ ರಿಂಕು ಸಿಕ್ಸರ್ ಸಿಡಿಸಿದರೂ, ಅದು ನೋಬಾಲ್ ಆಗಿತ್ತು. ಅಬಾಟ್ ನೋಬಾಲ್ ಎಸೆದ ಕಾರಣ ರಿಂಕು ಸಿಂಗ್ ಮೊತ್ತಕ್ಕೆ ಆ ಆರು ರನ್ ಸೇರ್ಪಡೆಯಾಗಲಿಲ್ಲ. ನೋಬಾಲ್ ಎಸೆದ ಕಾರಣ, ರಿಂಕು ಸಿಂಗ್ ಸಿಕ್ಸರ್ ಬಾರಿಸುವ ಮುನ್ನವೇ ಭಾರತಕ್ಕೆ ಒಂದು ರನ್ ಸೇರ್ಪಡೆಯಾಗಿದ್ದರಿಂದ, ಅದಾಗಲೆ ಭಾರತ ಗೆಲುವು ಸಾಧಿಸಿದ್ದರಿಂದ ಆ ಸಿಕ್ಸರ್ ಅನ್ನು ಪರಿಗಣಿಸಲಿಲ್ಲ.
ಆದ್ದರಿಂದ, ರಿಂಕು ಸಿಂಗ್ ಬಾರಿಸಿದ ಸಿಕ್ಸರ್ ಅನ್ನು ಭಾರತದ ಮೊತ್ತದಲ್ಲಿ ಅಥವಾ ಅವರ ವೈಯಕ್ತಿಕ ಸ್ಕೋರ್‌ಶೀಟ್‌ನಲ್ಲಿ ಎಣಿಸಲಾಗಿಲ್ಲ, ಏಕೆಂದರೆ ಅದು ಭಾರತವು ಪಂದ್ಯವನ್ನು ಗೆದ್ದ ನಂತರ ಬಂದಿತು.
ಐಸಿಸಿ ನಿಯಮಗಳು ಏನು ಹೇಳುತ್ತವೆ?
ಐಸಿಸಿ ಪುರುಷರ ಟಿ20 ಆಟದ ಪರಿಸ್ಥಿತಿಗಳು 16.5.1 ರ ಪ್ರಕಾರ: "16.1, 16.2 ಅಥವಾ 16.3.1 ಷರತ್ತುಗಳಲ್ಲಿ ವ್ಯಾಖ್ಯಾನಿಸಲಾದ ಫಲಿತಾಂಶವನ್ನು ತಲುಪಿದ ತಕ್ಷಣ, ಪಂದ್ಯವು ಅಂತ್ಯಗೊಳ್ಳುತ್ತದೆ. ಷರತ್ತು 41.17.2 (ಪೆನಾಲ್ಟಿ ರನ್ಗಳು) ಹೊರತುಪಡಿಸಿ ನಂತರ ಯಾವುದು ಲೆಕ್ಕಕ್ಕೆ ಬರುವುದಿಲ್ಲ, ಅದರ ಭಾಗವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಭಾರತಕ್ಕೆ ಕೊನೆಯ ಎಸೆತದಲ್ಲಿ ಗೆಲ್ಲಲು ಒಂದು ರನ್‌ಗಿಂತ ಹೆಚ್ಚಿನ ಅಗತ್ಯವಿದ್ದಲ್ಲಿ ರಿಂಕು ಅವರ ಸಿಕ್ಸರ್ ಪರಿಗಣಿಸಲ್ಪಡುತ್ತಿತ್ತು. ಆದರೆ ಕೇವಲ ಒಂದು ರನ್ ಬೇಕಿದ್ದ ಕಾರಣ ನೋಬಾಲ್ ನಿಂದ ಭಾರತ ಅದಾಗಲೆ ಗೆದ್ದ ಕಾರಣ ಸಿಕ್ಸರ್ ಪರಿಗಣಿಸಲಿಲ್ಲ.












Click it and Unblock the Notifications