Champions Trophy: ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ; ಮಹತ್ವದ ಹೇಳಿಕೆ ನೀಡಿದ ಶೋಯೆಬ್ ಅಖ್ತರ್
ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಬಹುತೇಕ ಮುಕ್ತಾಯವಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆಗೆ ಒಪ್ಪಲ್ಲ, ಭಾರತ ತಂಡ ಪಾಕಿಸ್ತಾನದಲ್ಲಿ ಆಡಬೇಕು ಎಂದು ಹಠ ಹಿಡಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ವರಸೆ ಬದಲಾಯಿಸಿದ್ದು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸಲು ಒಪ್ಪಿಕೊಂಡಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಎಲ್ಲಾ ವಿಚಾರಗಳನ್ನು ಪರಾಮರ್ಶಿಸಿರುವ ಅವರು ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಹೈಬ್ರಿಡ್ ಮಾದರಿಗೆ ಒಪ್ಪಿಕೊಳ್ಳಲು ಪಾಕಿಸ್ತಾನ ಇಟ್ಟಿರುವ ಬೇಡಿಕೆ ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ.

ಹೋಸ್ಟಿಂಗ್ ಹಕ್ಕುಗಳು ಮತ್ತು ಆದಾಯಕ್ಕಾಗಿ ಬೇಡಿಕೆ ಇಡಲಾಗಿದೆ, ನಾವು ಇದನ್ನು ಅರ್ಥ ಮಾಡಿಕೊಂಡಿದ್ದೇವೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ಬದರೇ ಇದ್ದರೆ ಅವರು ನಮ್ಮೊಂದಿಗೆ ಹೆಚ್ಚಿನ ಆದಾಯವನ್ನು ಹಂಚಿಕೊಳ್ಳಬೇಕು ಇದು ನ್ಯಾಯಯುತ ಬೇಡಿಕೆಯಾಗಿದೆ. ಆದರೆ ನಾವು ಸಂಬಂಧವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರದಲ್ಲಿ ಪಾಕಿಸ್ತಾನ ಬಲವಾಗಿರಬೇಕು, ಆದರೆ ಭಾರತದ ಜೊತೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ಅಗತ್ಯ ಕೂಡ ಇದೆ ಎಂದಿದ್ದಾರೆ. ಭಾರತದಲ್ಲಿ ನಡೆಯುವ ಐಸಿಸಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಮಾತನಾಡಿದ್ದು, ನಾವು ಸ್ನೇಹಹಸ್ತವನ್ನು ಚಾಚಬೇಕು ಎಂದಿದ್ದಾರೆ.
ಭಾರತದಲ್ಲಿ ಪಾಕಿಸ್ತಾನ ಆಡಬೇಕು
ಭವಿಷ್ಯದಲ್ಲಿ ಭಾರತದಲ್ಲಿ ಆಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಬಾರು. ನಾವು ಭಾರತದ ಜೊತೆ ಸ್ನೇಹಹಸ್ತ ಚಾಚಬೇಕು. ಪಾಕಿಸ್ತಾನ ಭಾರತಕ್ಕೆ ಹೋಗಬೇಕು, ಅಲ್ಲಿಗೆ ಹೋಗಿ ನಾವು ಅವರನ್ನು ಸೋಲಿಸಬೇಕು ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿಕೊಂಡಿರುವ ಹೈಬ್ರಿಡ್ ಮಾದರಿ ಬಗ್ಗೆ ಮಾತನಾಡಿ, ಹೈಬ್ರಿಡ್ ಮಾದರಿಗೆ ಮೊದಲೇ ಸಹಿ ಮಾಡಲಾಗಿದೆ ಎಂದು ನನಗೆ ಅರ್ಥವಾಗಿದೆ. ಪಿಸಿಬಿ ಅಧ್ಯಕ್ಷರು ಹಲವು ಹೇಳಿಕೆಗಳನ್ನು ನೀಡಬಹುದು, ಇದು ಕ್ರಿಕೆಟ್ ರಾಜತಾಂತ್ರಿಕತೆಯ ಭಾಗವಾಗಿದೆ ಎಂದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದ್ದೇನು?
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜನೆ ಮಾಡುತ್ತಿರುವ ವಿಚಾರವನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಬಹುತೇಕ ದೃಢಪಡಿಸಿದ್ದಾರೆ. "ಈ ಬಗ್ಗೆ ನಾನು ಹೆಚ್ಚು ಹೇಳಿಕೆ ನೀಡಲು ಬಯಸುವುದಿಲ್ಲ, ನಾವು ನಮ್ಮ ಅನಿಸಿಕೆಯನ್ನು ಐಸಿಸಿಗೆ ತಿಳಿಸಿದ್ದೇವೆ, ಬಿಸಿಸಿಐ ಕೂಡ ಅವರ ಅನಿಸಿಕೆ ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.
ಮೂರು ಷರತ್ತುಗಳನ್ನು ಪಾಕಿಸ್ತಾನ ಮುಂದಿಟ್ಟಿದ್ದು, ಆದಾಯದಲ್ಲಿ ಹೆಚ್ಚಿನ ಪಾಲನ್ನು ಕೇಳಿದ್ದು, 2031ರವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ಪಂದ್ಯಗಳು ಕೂಡ ತಟಸ್ಥ ಸ್ಥಳದಲ್ಲಿ ನಡೆಯಬೇಕು ಎಂದು ಬೇಡಿಕೆ ಇಟ್ಟಿದೆ. ಭಾರತ ಸೆಮಿಫೈನಲ್, ಫೈನಲ್ ತಲುಪದೇ ಇದ್ದರೆ ಆ ಪಂದ್ಯಗಳನ್ನು ಲಾಹೋರ್ ನಲ್ಲಿ ಆಯೋಜನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದೆ.












Click it and Unblock the Notifications