WPL 2025: ಹಿಂಗಾದ್ರೆ ಮಾತ್ರ ಆರ್‌ಸಿಬಿಗೆ ಪ್ಲೇಆಫ್ ತಲುಪಲು ಅವಕಾಶ
ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯಗಳು ಮುಕ್ತಾಯವಾಗುವ ಹಂತಕ್ಕೆ ಬಂದಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದ್ದು, ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುವ ಉತ್ಸಾಹದಲ್ಲಿದೆ. ಮುಂಬೈ ಇಂಡಿಯನ್ಸ್ ಕೂಡ ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ಇನ್ನೊಂದು ಸ್ಥಾನಕ್ಕಾಗಿ ಇದೀಗ ಎರಡು ತಂಡಗಳ ನಡುವೆ ಪೈಪೋಟಿ ಇದೆ.
ಗುರುವಾರ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದೆ. ಸೋಲು ಕಂಡ ಯುಪಿ ವಾರಿಯರ್ಸ್ ಬಹುತೇಕ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಆರ್ ಸಿಬಿ ಮತ್ತು ಗುಜರಾತ್ ಜೈಂಟ್ಸ್ ಪ್ಲೇಆಫ್ ರೇಸ್‌ನಲ್ಲಿದ್ದು ಎರಡೂ ತಂಡಗಳಿಗೂ ಅವಕಾಶವಿದೆ.

ಗುಜರಾಜ್ ಜೈಂಟ್ಸ್ 6 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿದ್ದು ಇನ್ನು ಎರಡು ಪಂದ್ಯಗಳನ್ನು ಆಡಲಿದೆ. ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಸೋತರೆ ಆರ್ ಸಿಬಿಗೆ ಅನುಕೂಲವಾಗಲಿದೆ. ಗುಜರಾತ್ ಜೈಂಟ್ಸ್ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಆರ್ ಸಿಬಿ ಮನೆ ದಾರಿ ಹಿಡಿಯಬೇಕಾಗುತ್ತದೆ.
ಆರ್ ಸಿಬಿಗೆ ಪ್ಲೇಆಫ್ ಲೆಕ್ಕಾಚಾರ?
ಆರ್ ಸಿಬಿ ಪ್ಲೇ ಆಫ್ ಲೆಕ್ಕಾಚಾರ ಈಗ ಸುಲಭವಾಗಿದೆ. ಉಳಿದಿರುವ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕು, ಗುಜರಾತ್ ಜೈಂಟ್ಸ್ ಉಳಿದ ಎರಡೂ ಪಂದ್ಯಗಳನ್ನು ಸೋತು, ಆರ್ ಸಿಬಿ ಉಳಿದ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆದ್ದರೆ ಪ್ಲೇಆಫ್ ತಲುಪಬಹುದು.
ಆರ್ ಸಿಬಿ ಮುಂದಿನ ಪಂದ್ಯವನ್ನು ಲಕ್ನೋದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ. ಶನಿವಾರ ಈ ಪಂದ್ಯ ನಡೆಯಲಿದ್ದು ಯುಪಿ ವಾರಿಯರ್ಸ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದರೆ ಪ್ಲೇಆಫ್ ಅವಕಾಶ ಇರುತ್ತದೆ. ಆರ್ ಸಿಬಿ ವಿರುದ್ಧ ಸೋತರೆ ಅಧಿಕೃತವಾಗಿ ಯುಪಿ ವಾರಿಯರ್ಸ್ ಪ್ಲೇಆಫ್ ರೇಸ್‌ನಿಂದ ಹೊರಗುಳಿಯುತ್ತದೆ.
ಯುಪಿ ವಾರಿಯರ್ಸ್ ಬಳಿಕ ಮಾರ್ಚ್ 11ರಂದು ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಇದು ಲೀಗ್ ಹಂತದ ಕೊನೆಯ ಪಂದ್ಯವಾಗಲಿದ್ದು, ಗುಜರಾತ್ ಜೈಂಟ್ಸ್ ಎರಡೂ ಪಂದ್ಯ ಸೋತರೆ ಆರ್ ಸಿಬಿ ಈ ಪಂದ್ಯದಲ್ಲಿ ಎಷ್ಟು ರನ್ ಅಂತರದಲ್ಲಿ ಗೆಲ್ಲಬೇಕು ಎನ್ನುವ ಲೆಕ್ಕಾಚಾರ ಮೊದಲೇ ಗೊತ್ತಿರುತ್ತದೆ. ಉತ್ತಮ ಪ್ರದರ್ಶನ ನೀಡಿ ಗೆದ್ದರೆ ಪ್ಲೇಆಫ್‌ಗೆ ಹೋಗಬಹುದು.
2024ರ ಆವೃತ್ತಿಯಲ್ಲಿ ಕೂಡ ಆರ್ ಸಿಬಿ ಇದೇ ಸನ್ನಿವೇಶದಲ್ಲಿ ಸಿಲುಕಿತ್ತು. ಬಳಿಕ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಫೈನಲ್ ತಲುಪಿದ್ದು ಅಲ್ಲದೆ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಟ್ರೋಫಿ ಎತ್ತಿಹಿಡಿದಿತ್ತು. ಈ ಬಾರಿ ಕೂಡ ಅದನ್ನೇ ಮುಂದುವರೆಸುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications