India vs New Zealand: ಮೂರನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಯುವ ವೇಗಿಗೆ ಸಿಕ್ತು ಅವಕಾಶ
ನವೆಂಬರ್ 1ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಭಾರತ ತಂಡ ಶಪಥ ಮಾಡಿದೆ. ತಂಡದಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಭಾರತ ತಂಡ ಸೇರಿಕೊಳ್ಳುವಂತೆ ಯುವ ವೇಗದ ಬೌಲರ್ ಗೆ ಆಹ್ವಾನ ನೀಡಲಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ, ಯುವ ವೇಗದ ಬೌಲರ್ ಹರ್ಷಿತ್ ರಾಣಾ ಮುಂಬೈನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದು, ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಕೆಕೆಆರ್ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿರುವ ಹರ್ಷಿತ್ ರಾಣಾ, ಐಪಿಎಲ್ 2024ರ ಆವೃತ್ತಿಯಲ್ಲಿ ಯಶಸ್ವಿ ಬೌಲರ್ ಆಗಿದ್ದರು. ಉತ್ತಮ ಪ್ರದರ್ಶನ ನೀಡಿದ ಬಳಿಕ ಭಾರತ ಟಿ20 ತಂಡದಲ್ಲಿ ಕೂಡ ಸ್ಥಾನ ಪಡೆದಿದ್ದರು. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಕೂಡ ಭಾರತ ಟೆಸ್ಟ್ ತಂಡದಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಅಂದುಕೊಂಡಿದ್ದಕ್ಕಿಂತ ಮೊದಲೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ
ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಜಸ್ಪ್ರೀತ್ ಬುಮ್ರಾರಿಗೆ ಮೂರನೇ ಟೆಸ್ಟ್‌ನಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ. ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಬುಮ್ರಾ ಆಡುವುದು ಭಾರತ ತಂಡದಕ್ಕೆ ಅತ್ಯಂತ ಮುಖ್ಯ ಕೂಡ ಆಗಿದೆ. ಐದು ಪಂದ್ಯಗಳ ಸರಣಿ ಆಡುವ ಕಾರಣ ಬುಮ್ರಾ ಮೇಲಿನ ಒತ್ತಡ ಕಡಿಮೆ ಮಾಡಲು ಕೊನೆಯ ಟೆಸ್ಟ್‌ನಲ್ಲಿ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ಮೂವರು ವೇಗಿಗಳು ಕಣಕ್ಕೆ
ಮುಂಬೈನ ವಾಂಖೆಡೆ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ, ಇಲ್ಲಿ ಸ್ಪಿನ್ ಬೌಲರ್ ಗಳಿಗೆ ನೆರವು ಸಿಗುವ ಸಾಧ್ಯತೆ ಕಡಿಮೆ ಇದ್ದು, ವೇಗಿಗಳು ತಕ್ಕ ಮಟ್ಟಿಗೆ ಅನುಕೂಲ ಪಡೆಯಲಿದ್ದಾರೆ. ಇದೇ ಕಾರಣದಿಂದ ಭಾರತ ಮೂವರು ವೇಗಿಗಳ ಜೊತೆ ಕಣಕ್ಕಿಳಿಯುವ ಸಾಧ್ಯತೆ ಇದೆ.
ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆ ಹರ್ಷಿತ್ ರಾಣಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಪುಣೆ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ವಾಷಿಂಗ್ಟನ್ ಸುಂದರ್ ಮೂರನೇ ಟೆಸ್ಟ್‌ನಲ್ಲಿ ಕೂಡ ಆಡಲಿದ್ದಾರೆ. ಆರ್ ಅಶ್ವಿನ್ ಅಥವಾ ರವೀಂದ್ರ ಜಡೇಜಾ ಇಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಭಾರತಕ್ಕೆ ಮೂರನೇ ಟೆಸ್ಟ್ ಗೆಲ್ಲುವುದು ಅತ್ಯಗತ್ಯವಾಗಿದ್ದು, ರೋಹಿತ್ ಶರ್ಮಾ ಮತ್ತು ಪಡೆಗೆ ದೊಡ್ಡ ಸವಾಲು ಎದುರಾಗಿದೆ.












Click it and Unblock the Notifications