SRH vs GT: ಡಿಎಸ್‌ಪಿ ಸಿರಾಜ್ ಅಬ್ಬರಕ್ಕೆ ತವರಿನಲ್ಲೇ ತತ್ತರಿಸಿದ ಸನ್‌ರೈಸರ್ಸ್ ಹೈದರಾಬಾದ್
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ಗುಜರಾತ್ ಬೌಲಿಂಗ್ ಎದುರು ತತ್ತರಿಸಿತು.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತು. ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿ ಮಾಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್‌ಗೆ ಆಘಾತ ಕೊಟ್ಟರು.

ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾರನ್ನು ಔಟ್ ಮಾಡಿದರೆ. ಕೊನೆಯಲ್ಲಿ ಅನಿಕೇತ್ ವರ್ಮಾ ಮತ್ತು ಸಿಮರ್ಜೀತ್ ಸಿಂಗ್ ಅವರ ವಿಕೆಟ್ ಪಡೆದರು. 4 ಓವರ್ ಗಳಲ್ಲಿ 17 ರನ್ ಬಿಟ್ಟುಕೊಟ್ಟ ಸಿರಾಜ್ 4 ವಿಕೆಟ್ ಪಡೆಯುವ ಐಪಿಎಲ್‌ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಈವರೆಗಿನ ಐಪಿಎಲ್‌ನಲ್ಲಿ ಇದು ಸಿರಾಜ್ ಅವರ ಉತ್ತಮ ಬೌಲಿಂಗ್ ಅಂಕಿಅಂಶವಾಗಿದೆ.
ನಿತೀಶ್ ರೆಡ್ಡಿ 31 ರನ್ ಗಳಿಸಿದರೆ, ಕ್ಲಾಸೆನ್ 27 ರನ್ ಗಳಿಸುವ ಮೂಲಕ ಹೈದರಾಬಾದ್‌ಗೆ ಆಸರೆಯಾದರೂ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ನಾಯಕ ಪ್ಯಾಟ್ ಕಮ್ಮಿನ್ಸ್ 9 ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ತಂಡದ ಮೊತ್ತ 150 ರನ್ ಗಳಿಸಲು ಕಾರಣವಾದರು. ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದರು.
ಗಿಲ್, ವಾಷಿಂಗ್ಟನ್ ಜವಾಬ್ದಾರಿಯುತ ಆಟ
153 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಾಯಿ ಸುದರ್ಶನ್ ಕೇವಲ 5 ರನ್ ಗಳಿಸಿ ಔಟಾದರೆ, ಜೋಸ್ ಬಟ್ಲರ್ ರನ್ ಗಳಿಸುವ ಮುನ್ನವೆ ವಿಕೆಟ್ ಒಪ್ಪಿಸಿದರು. ನಾಯಕ ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 90 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.
ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು. ಬಳಿಕ ಬಂದ ಶೆರ್ಫಾನೆ ರುಥರ್ ಫೋರ್ಡ್ 16 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 35 ರನ್ ಗಳಿಸಿ ತಂಡದ ಗೆಲುವು ಸುಲಭವಾಗಿಸಿದರು. ನಾಯಕ ಶುಭಮನ್ ಗಿಲ್ 43 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 61 ರನ್ ಗಳಿಸುವ ಮೂಲಕ ಫಾರ್ಮ್‌ಗೆ ಮರಳಿದರು.
ಈ ಗೆಲುವಿನ ಮೂಲಕ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಆಡಿರುವ 4 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಈ ಸೋಲಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 10ನೇ ಸ್ಥಾನದಲ್ಲಿಯೇ ಮುಂದುವರೆದಿದೆ.












Click it and Unblock the Notifications