ಗುಜರಾತ್‌ಗೆ ಆಘಾತ; ಐಪಿಎಲ್‌ನಿಂದ ಕೇನ್ ವಿಲಿಯಮ್ಸನ್ ಹೊರಕ್ಕೆ
ಬೆಂಗಳೂರು, ಏಪ್ರಿಲ್ 02; ಈ ಬಾರಿಯ ಐಪಿಎಲ್ ಅವೃತ್ತಿಯ ಮೊದಲ ಪಂದ್ಯದಲ್ಲಿಯೇ ಗೆದ್ದು ಬೀಗಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಬಹುದೊಡ್ಡ ಆಘಾತ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಗಾಯಗೊಂಡಿದ್ದ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬ್ಯಾಟ್ಸಮನ್ ಕೇನ್ ವಿಲಿಯಮ್ಸನ್ ಸಂಪೂರ್ಣ ಐಪಿಎಲ್ 2023 ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶುಕ್ರವಾರ 2023ನೇ ಸಾಲಿನ ಐಪಿಎಲ್ ಉದ್ಘಾಟನಾ ಸಮಾರಂಭದ ಬಳಿಕ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 5 ವಿಕೆಟ್‌ಗಳ ವಿಜಯ ಸಾಧಿಸಿತ್ತು. ಈ ಪಂದ್ಯದ ವೇಳೆ ಡೀಪ್ ಸ್ಕೈರ್ ಲೆಗ್ ಬಳಿ ಫೀಲ್ಡಿಂಗ್ ಮಾಡುವಾಗ ಕೇನ್ ವಿಲಿಯಮ್ಸನ್ ಮೊಣಕಾಲಿಗೆ ಗಾಯವಾಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಋತುರಾಜ್ ಗಾಯಕ್ವಾಡ್ ಹೊಡೆದ ಚೆಂಡನ್ನು ಹಿಡಿಯುವಾಗ ಕೇನ್ ವಿಲಿಯಮ್ಸನ್ ಮೊಣಕಾಲಿಗೆ ಗಾಯವಾಗಿತ್ತು. ಆದ್ದರಿಂದ ಅವರು ಮೈದಾನವನ್ನು ತೊರೆದಿದ್ದರು. ಈಗ ಈ ಬಾರಿಯ ಟೂರ್ನಿಯಿಂದಲೇ ಅವರು ನಿರ್ಗಮಿಸಿದ್ದು, ಗುಜರಾತ್ ಟೈಟಾನ್ಸ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ಫೀಲ್ಡಿಂಗ್ ವೇಳೆ ಗಾಯಗೊಂಡ ಕೇನ್ ವಿಲಿಯಮ್ಸನ್‌ರನ್ನು ಫಿಸಿಯೋಗಳು ಪರೀಕ್ಷೆ ಮಾಡಿದ್ದರು. ಅವರು ಫೀಲ್ಡಿಂಗ್ ಮಾಡಲು ಸಾಧ್ಯವಾಗದ ಕಾರಣ ಇಬ್ಬರು ಸಿಬ್ಬಂದಿಗಳ ನೆರವಿನಿಂದ ಮೈದಾನದಿಂದ ಹೊರಹೋಗಿದ್ದರು. ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ವೇಳೆಯಲ್ಲಿ ಕೇನ್ ವಿಲಿಯಮ್ಸನ್ ಬದಲು ಸಾಯಿ ದರ್ಶನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದ್ದರು.

2 ಕೋಟಿ ರೂ.ಗೆ ಖರೀದಿ; ನ್ಯುಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ನಾಯಕರಾಗಿದ್ದರು. ಆಟಗಾರರ ಹರಾಜಿನ ವೇಳೆ ತಂಡ ಅವರನ್ನು ಬಿಡುಗಡೆ ಮಾಡಿತ್ತು. 32 ವರ್ಷದ ಕೇನ್ ವಿಲಿಯಮ್ಸನ್ಸ್‌ರನ್ನು ಗುಜರಾತ್ ಟೈಟಾನ್ಸ್ 2 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆದರೆ ಈಗ ಅವರು ಈ ಬಾರಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
ಬ್ಯಾಟರ್ ಕೇನ್ ವಿಲಿಯಮ್ಸನ್ ಉತ್ತಮ ಫಾರ್ಮ್‌ನಲ್ಲಿದ್ದರು. ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ದ್ವಿ-ಶತಕಗಳಿಸುವ ಮೂಲಕ ಬ್ಯಾಟಿಂಗ್ ಲಯಕ್ಕೆ ಮರಳಿದ್ದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗುಜರಾತ್ ಟೈಟಾನ್ಸ್ ತಂಡಕ್ಕೆ ಬೆಂಬಲವಾಗಿ ನಿಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಮೊದಲ ಪಂದ್ಯದಲ್ಲಿಯೇ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಯಲ್ಲಿ ಒಂದೂ ಬಾಲ್ ಎದುರಿಸದೇ ಟೂರ್ನಿಯಿಂದ ಹೊರ ಹೋಗಿದ್ದಾರೆ.
2015ರಲ್ಲಿ ಕೇನ್ ವಿಲಿಯಮ್ಸನ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. 77 ಪಂದ್ಯಗಳಲ್ಲಿ 2101ಗಳಿಸಿದ್ದ ಅವರು 126.03 ಸ್ಟ್ರೈಕ್ ರೇಟ್ ಹೊಂದಿದ್ದರು. 2018ರ ಐಪಿಎಲ್ ಟೂರ್ನಿಯ 17 ಪಂದ್ಯಗಳಲ್ಲಿ 735 ರನ್ ಸಿಡಿಸಿದ್ದರು. ಹೈದರಾಬಾದ್ ತಂಡದ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಈ ಬಾರಿಯ ಟೂರ್ನಿಯಲ್ಲಿ ಗಾಯಗೊಂಡಿರುವ ಅವರಿಗೆ ವಿಶ್ರಾಂತಿಯ ಅಗತ್ಯವಿರುವ ಕಾರಣ ಸಂಪೂರ್ಣ ಟೂರ್ನಿಯಿಂದ ಹೊರಗೊಳಿದಿದ್ದಾರೆ.
16ನೇ ಅವೃತ್ತಿಯ ಐಪಿಎಲ್ ಟೂರ್ನಿಗೆ ಶುಕ್ರವಾರ ಚಾಲನೆ ಸಿಕ್ಕಿತ್ತು. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್ ಟೂರ್ನಿಯಲ್ಲಿ ಮುಂದುವರೆಯುವ ಕುರಿತು ಅನುಮಾನ ಉಂಟಾಗಿತ್ತು. ವೈದ್ಯಕೀಯ ಪರೀಕ್ಷೆಗಳ ಬಳಿಕ ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದ್ದು, ಈ ಬಾರಿಯ ಟೂರ್ನಿಯಿಂದ ಹೊರಹೋಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಬಳಿಕ ಮಾತನಾಡಿದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, "ಕೇನ್ ವಿಲಿಯಮ್ಸನ್ ಅವರಿಗೆ ಆಗಿರುವ ಗಾಯದ ಗಂಭೀರತೆ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಮೊಣಕಾಲಿಗೆ ಗಾಯವಾಗಿದೆ. ಆದರೆ ಗಾಯದ ಗಂಭೀರತೆ ಮತ್ತು ಚೇತರಿಕೆಗೆ ಎಷ್ಟು ಸಮಯ ಬೇಕು ಎಂಬುದು ತಿಳಿದಿಲ್ಲ" ಎಂದು ಮಾಹಿತಿ ನೀಡಿದ್ದರು.












Click it and Unblock the Notifications