Ind vs Aus: ನೀವಿಬ್ಬರೂ ದಯವಿಟ್ಟು ನಿವೃತ್ತಿ ಘೋಷಿಸಿ! ಸ್ಟಾರ್ ಆಟಗಾರರಿಗೆ ಅಭಿಮಾನಿಗಳ ಒತ್ತಾಯ
ಅಡಿಲೇಡ್‌ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟ ಮುಕ್ತಾಯದ ವೇಳೆಗೆ ಭಾರತ 5 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿದ್ದು ಇನ್ನೂ 29 ರನ್ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 180 ರನ್‌ಗಳಿಗೆ ಆಲೌಟ್ ಆಗಿದ್ದರೆ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್ ಗಳಿಸಿ 157 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಮತ್ತೆ ಬ್ಯಾಟರ್ ಗಳು ಕೈಕೊಟ್ಟರು. ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿದರೆ, ಕೆಎಲ್ ರಾಹುಲ್ ಕೇವಲ 7 ರನ್ ಗಳಿಸಿದರು. ಶುಭಮನ್ ಗಿಲ್ 28 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 11 ರನ್ ಮತ್ತು ರೋಹಿತ್ ಶರ್ಮಾ ಕೇವಲ 6 ರನ್ ಗಳಿಸಿದರು. ರಿಷಬ್ ಪಂತ್ ಮತ್ತು ನಿತೀಶ್ ರೆಡ್ಡಿ ಕ್ರೀಸ್‌ನಲ್ಲಿದ್ದು, ಮೂರನೇ ದಿನದಾಟ ಆರಂಭಿಸಲಿದ್ದಾರೆ. ಇವರಿಬ್ಬರೂ ದೊಡ್ಡ ಮೊತ್ತ ಕಲೆ ಹಾಕಿದರೆ ಮಾತ್ರ ಭಾರತಕ್ಕೆ ಪಂದ್ಯದಲ್ಲಿ ಗೆಲ್ಲಲು ಒಂದು ಅವಕಾಶ ಇರಲಿದೆ.

ಎರಡನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರದರ್ಶನ ನೋಡಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ನೀವಿಬ್ಬರೂ ನಿವೃತ್ತಿ ಘೋಷಣೆ ಮಾಡಿದರೆ ಒಳ್ಳೆಯದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಲಹೆ ಕೂಡ ನೀಡುತ್ತಿದ್ದಾರೆ.
ಬೇರೆಯವರಿಗೆ ಅವಕಾಶ ಸಿಗಲಿ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಇತ್ತೀಚಿನ ಟೆಸ್ಟ್ ಇನ್ನಿಂಗ್ಸ್‌ಗಳನ್ನು ಉದಾಹರಣೆ ಕೊಟ್ಟಿದ್ದು, ನಿಮ್ಮಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ ನೀವಿಬ್ಬರೂ ನಿವೃತ್ತಿ ಘೋಷಣೆ ಮಾಡಿದರೆ ಹೊಸ ಆಟಗಾರರಿಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ. ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್‌ನಲ್ಲಿ ಶತಕ ಬಾರಿಸಿದರೂ, ಒತ್ತಡದ ಸಂದರ್ಭದಲ್ಲಿ ಕೊಹ್ಲಿಯಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ ಎಂದು ಅಭಿಮಾನಿಗಳು ದೂರುತ್ತಿದ್ದಾರೆ.
ಇನ್ನು ರೋಹಿತ್ ಶರ್ಮಾ ಕಳೆದ 12 ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ, ಟಿ20 ಮಾದರಿಗೆ ನಿವೃತ್ತಿ ಘೋಷಿಸಿದಂತೆ ಟೆಸ್ಟ್ ಕ್ರಿಕೆಟ್‌ಗೂ ನಿವೃತ್ತಿ ಘೋಷಣೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ನಾಯಕತ್ವ ಬದಲಾಯಿಸಿದ್ದೇಕೆ?
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಮೊದಲನೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಕಂಡಿತ್ತು, ಜಸ್ಪ್ರೀತ್ ಬುಮ್ರಾ ನಾಯಕತ್ವವನ್ನು ಚೆನ್ನಾಗಿಯೇ ನಿಭಾಯಿಸಿದ್ದರು. ರೋಹಿತ್ ಶರ್ಮಾ ಎರಡನೇ ಟೆಸ್ಟ್‌ಗೆ ಮರಳಿದ್ದು ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬುಮ್ರಾ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದ್ದಾಗ ಸರಣಿ ಮಧ್ಯದಲ್ಲಿ ನಾಯಕತ್ವ ಬದಲಾವಣೆ ಅಗತ್ಯವೇನಿತ್ತು ಎಂದಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಆಟಗಾರರಲ್ಲಿದ್ದ ಉತ್ಸಾಹ ಇಲ್ಲಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications