T20 World Cup: ದ್ರಾವಿಡ್, ಕೊಹ್ಲಿ, ರೋಹಿತ್ ಕನಸು ನನಸು
ಟೀಂ ಇಂಡಿಯಾದ 13 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯವಾಗಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಟಿ20 ವಿಸ್ವಕಪ್ ಗೆಲುವಿನ ಮುಲಾಮು ಸಿಕ್ಕಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ 13 ವರ್ಷದ ಬಳಿಕ ಐಸಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 17 ವರ್ಷಗಳ ಬಳಿಕ ಎರಡನೇ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದೆ.

ಭಾರತ ಸೋತೇಬಿಟ್ಟಿತು ಎನ್ನುವ ಹಂತದಲ್ಲಿದ್ದ ಪಂದ್ಯವನ್ನು ಭಾರತ ಗೆದ್ದುಕೊಂಡಿದ್ದೇ ರೋಚಕ. ಹಾರ್ದಿಕ್ ಪಾಂಡ್ಯ ಹೆನ್ರಿಚ್ ಕ್ಲಾಸೆನ್ ಅವರ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ಕೊಟ್ಟರು.
ಆ ಮೂವರ ಕನಸು ನನಸು
ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಿಗೆ ಕೊನೆಯ ಟಿ20 ವಿಶ್ವಕಪ್ ಆಗಿದ್ದರೆ, ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಇದು ಕೊನೆಯ ವಿಶ್ವಕಪ್ ಆಗಿತ್ತು. ಆಟಗಾರನಾಗಿ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದ ರಾಹುಲ್ ದ್ರಾವಿಡ್ ಕೋಚ್ ಆಗಿ ತಮ್ಮ ಕನಸು ನೆರವೇರಿಸಿಕೊಂಡಿದ್ದಾರೆ. ಭಾರತ ಗೆಲ್ಲುತ್ತಿದ್ದಂತೆ ಸದಾ ಶಾಂತವಾಗಿರುತ್ತಿದ್ದ ದ್ರಾವಿಡ್ ಕೂಡ ಕುಣಿದು ಕುಪ್ಪಳಿಸಿದರು.
ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಎಲ್ಲರಿಗೂ ಆಘಾತ ಕೊಟ್ಟಿದ್ದಾರೆ. ಇದೇ ನನ್ನ ಕೊನೆಯ ಟಿ20 ವಿಶ್ವಕಪ್ ಎಂದ ಅವರು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಯುವಕರಿಗೆ ಅವಕಾಶ ಸಿಗಬೇಕು ಅದಕ್ಕಾಗಿ ನಾನು ಟಿ20 ವಿಶ್ವಕಪ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದಿದ್ದಾರೆ.
ಇಡೀ ವಿಶ್ವಕಪ್‌ನಲ್ಲಿ ರನ್ ಗಳಿಸುವಲ್ಲಿ ವಿಫಲವಾಗಿದ್ದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ 76 ರನ್ ಗಳಿಸುವ ಮೂಲಕ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ರೋಹಿತ್ ಶರ್ಮಾ ಅವರಿಗೂ ಇದು ಕೊನೆಯ ಟಿ20 ವಿಶ್ವಕಪ್ ಆಗಿದೆ. ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತು ಕಣ್ಣೀರು ಹಾಕಿದ್ದ ರೋಹಿತ್ ಶರ್ಮಾ, ನಾಯಕತ್ವ ತ್ಯಜಿಸಲು ಮುಂದಾಗಿದ್ದರು, ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ ರೋಹಿತ್ ಶರ್ಮಾ ಅವರೇ ಟಿ20 ವಿಶ್ವಕಪ್‌ಗೂ ನಾಯಕ ಎಂದು ಘೋಷಿಸಿ, ಅವರ ಮೇಲೆ ನಂಬಿಕೆ ಇಟ್ಟಿದ್ದರು. ಈಗ ಈ ಮೂವರೂ ತಮ್ಮ ಕನಸು ನನಸು ಮಾಡಿಕೊಂಡಿದ್ದು ಐಸಿಸಿ ಟ್ರೋಫಿ ಗೆದ್ದಿದ್ದಾರೆ.












Click it and Unblock the Notifications