ICC World Cup 2023: ಭಾರತ ಐಸಿಸಿ ಏಕದಿನ ವಿಶ್ವಕಪ್ ಸೋತಿದ್ದು ಎಲ್ಲಿ?
ಭಾರತ ಕ್ರಿಕೆಟ್ ಟೀಂ ಈ ಬಾರಿ ಅತ್ಯಂತ ಶಕ್ತಿಶಾಲಿಯಾಗಿ ಮುನ್ನುಗ್ಗಿತ್ತು. ಅದ್ರಲ್ಲೂ ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನ ಕೂಡ ಸೋಲದೆಯೇ ಅಬ್ಬರಿಸಿತ್ತು. ವಿಶ್ವಕಪ್ ಆರಂಭದಲ್ಲಿ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧವೇ ಆಡಿದ್ದ ಟೀಂ ಇಂಡಿಯಾ ಆಸಿಸ್ ಪಡೆಗೆ ಹೀನಾಯ ಸೋಲು ಕರುಣಿಸಿತ್ತು. ಆದರೆ ಇಂದಿನ ಫೈನಲ್ ಪಂದ್ಯದಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಂಡಿದೆ ಆಸ್ಟ್ರೇಲಿಯಾ. ಭಾರತದ ಕಳಪೆ ಫೀಲ್ಡಿಂಗ್ ವಿರುದ್ಧವೇ ಪ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.
ಕ್ರಿಕೆಟ್‌ನಲ್ಲಿ ಒಂದು ಮಾತಿದೆ 100 ರನ್ ಗಳಿಸದಿದ್ದರೂ ಪರವಾಗಿಲ್ಲ, 3 ರನ್ ಉಳಿಸುವ ಶಕ್ತಿ ಒಬ್ಬ ಆಟಗಾರನಿಗೆ ಇರಬೇಕು ಅಂತ. ಈ ಮಾತಿನ ಅರ್ಥ 100 ರನ್ 3 ರನ್‌ಗೆ ಸಮ ಅಂತ ಅಲ್ಲ, ಆದರೆ ಕ್ರಿಕೆಟ್ ಆಟಗಾರನಿಗೆ ಶಿಸ್ತು ಇರಲೇಬೇಕು. ಫೀಲ್ಡಿಂಗ್ ಬಗ್ಗೆ ಶ್ರದ್ಧೆಯು ಇರಬೇಕು. ಆದರೆ ಭಾರತ ತಂಡಕ್ಕೆ ಇಂದಿನ ಪಂದ್ಯದಲ್ಲಿ ಅದ್ಯಾವುದೂ ಇರಲಿಲ್ಲ ಅಂತಾ ಕಣ್ಣಿಗೆ ರಾಚುತ್ತದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರು ಪ್ರತಿ ಒಂದೊಂದು ಚೆಂಡನ್ನ ಮೈ ಬಗ್ಗಿಸಿ ತಡೆದರು. ಒದ್ದಾಡಿ ಹಿಡಿದರು, ಆದ್ರೆ ಭಾರತ ತಂಡ ಮಾಡಿದ್ದು ಏನು ಗೊತ್ತಾ? ಹೇಳಲು ಬೇಸರವಾಗುತ್ತದೆ.

ಇದು ಸತ್ಯ ಮಾತಾಡುವ ಸಮಯ!
ಹೌದು, ಭಾರತ ತಂಡದ ಆಟಗಾರರು ಅದೇನೋ ಮಾಡಲು ಹೋಗಿ.. ಏನೇನೋ ಮಾಡಿ ಸೋತು ಸುಣ್ಣವಾಗಿದ್ದಾರೆ. ಈಗ ಅಭಿಮಾನಿಗಳು ಸತ್ಯ ಮಾತನಾಡುತ್ತಿದ್ದಾರೆ, ಹಾಗೆ ಇದೇ ವೇಳೆ ಭಾರತ ತಂಡದ ಭೀಕರ ಸೋಲಿನ ಕುರಿತು ರೊಚ್ಚಿಗೆದ್ದಿದ್ದಾರೆ. ಕಾಲಿನ ಬಳಿ ಬಾಲ್ ಬರುವಾಗ ಬಿಟ್ಟರು, ಬೌಂಡರಿ ಲೈನ್‌ಗೆ ಬಾಲ್ ನುಗ್ಗುವಾಗ ಸುಮ್ಮನೆ ನಿಂತರು. ಇದೆಲ್ಲಾ ಇವರದ್ದೇ ತಪ್ಪು ಅಂತಾ ಕ್ರಿಕೆಟ್ ಅಭಿಮಾನಿಗಳು ಇದೀಗ ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾ, ಭಾರತ ಕ್ರಿಕೆಟ್ ತಂಡದ ಆಟಗಾರರ ವಿರುದ್ಧ ತಮ್ಮ ಕೋಪ ಹೊರಹಾಕಲು ಅಭಿಮಾನಿಗಳಿಗೆ ವೇದಿಕೆ ಒದಗಿಸಿದೆ.
ಯಾಕ್ ಗುರೂ ಇಷ್ಟು ಕೆಟ್ಟ ಫೀಲ್ಡಿಂಗ್?
ಭಾರತ ತಂಡದ ಫೀಲ್ಡಿಂಗ್‌ನಲ್ಲಿ ಶಿಸ್ತು ಇಲ್ಲವೆಂಬುದು ದೊಡ್ಡ ಸಮಸ್ಯೆಯಾಗುತ್ತಿದೆ. ಇದು ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೂಡ ಭಾರತಕ್ಕೆ ಅರ್ಥವಾಗಿತ್ತು. ಈ ಸತ್ಯ ಅರಿತು ತಪ್ಪು ಸರಿ ಮಾಡಿಕೊಳ್ಳದ ಭಾರತ ತಂಡ ಇಂದು ಆಸ್ಟ್ರೇಲಿಯಾ ವಿರುದ್ಧವೂ ಹೀನಾಯ ಸೋಲು ಕಂಡಿದೆ. ಹಾಗೇ ಶತಕೋಟಿ ಭಾರತೀಯ ಹೃದಯಗಳಿಗೂ ತಡೆಯಲು ಆಗದ ನೋವು ಕೊಟ್ಟಿದೆ. ಈಗಲಾದರೂ ಭಾರತದ ಆಟಗಾರರು ತಮ್ಮ ಕಳಪೆ ಫೀಲ್ಡಿಂಗ್ ಬದಲಾಯಿಸಿಕೊಳ್ಳಲಿ, ಭವಿಷ್ಯಕ್ಕೆ ಇದು ಉತ್ತಮ ಅಂತಿದ್ದಾರೆ ಭಾರತದ ಕ್ರಿಕೆಟ್ ಫ್ಯಾನ್ಸ್.
ಕೊಹ್ಲಿ ಕೊಡುಗೆ ಜಯ ಕೊಡಿಸಲಿಲ್ಲ
ಭಾರತ ತಂಡ ಇಂದು ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಟಾಸ್‌ನ ಸೋತು ಬ್ಯಾಟಿಂಗ್ ಆರಂಭಿಸಿತು. ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಬೆನ್ನೆಲುಬಾಗಿ ನಿಂತರು. ಹೀಗೆ ಕೊಹ್ಲಿ ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲೂ 54 ರನ್ ಬಾರಿಸಿ ಟೂರ್ನಿಯಲ್ಲಿ ಒಟ್ಟಾರೆ 765 ರನ್ ಗಳಿಸಿ ಚರಿತ್ರೆ ಬರೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿ ಒಂದೇ ಸೀಸನ್‌ನಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಕೊಹ್ಲಿ ಆಗಿದ್ದಾರೆ. ಇಷ್ಟಾದರೂ ಭಾರತ ತಂಡಕ್ಕೆ ಫೈನಲ್ ಪಂದ್ಯದಲ್ಲಿ ಗೆಲುವು ತಂದುಕೊಡಲು ಆಗಲೇ ಇಲ್ಲ. ಭಾರತ ತಂಡ ಫೈನಲ್ ಮ್ಯಾಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ.

ಒಟ್ನಲ್ಲಿ ಭಾರತ ತಂಡ ಈ ಸೋಲಿನಿಂದ ಕುಗ್ಗಿ ಹೋಗುವ ಬದಲು ಇನ್ನಷ್ಟು ಕಲಿಯಲಿ ಅನ್ನೋದೆ ಅಭಿಮಾನಿಗಳ ಆಶಯ. ಅದರಲ್ಲೂ ಫೀಲ್ಡಿಂಗ್ ಅಶಿಸ್ತನ್ನು ಸರಿಮಾಡಿಕೊಂಡು ಮುನ್ನಗಬೇಕಿದ್ದು, ಇದು ಸರಿಯಾಗದೇ ಇದ್ದರೆ ಭವಿಷ್ಯದಲ್ಲಿ ಭಾರತದ ಕ್ರಿಕೆಟ್‌ಗೆ ಇನ್ನಷ್ಟು ಸೋಲುಗಳು ಎದುರಾಗುವುದು ಗ್ಯಾರಂಟಿ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೇವಲ 240 ರನ್ ಗಳಿಸಿ ಆಲೌಟ್ ಆಗಿದ್ದ ಭಾರತ ತಂಡ, ಆಸ್ಟ್ರೇಲಿಯಾಗೆ ಸುಲಭದ ತುತ್ತಾಗಿದೆ.












Click it and Unblock the Notifications