ವೈಭವ್ ಸೂರ್ಯವಂಶಿ ಆಡಿಸಿ, ಸಂಜು ಸ್ಯಾಮ್ಸನ್ ಬಲಿಪಶು ಮಾಡ್ಬೇಡಿ: ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಹಿಂಗ್ ಹೇಳಿದ್ಯಾಕೆ?
Dinesh Karthik: ಇದೀಗ ಸದ್ಯ ನ್ಯೂಜಿಲೆಂಡ್ ಹಾಗೂ ಭಾರತ ನಡುವೆ ಟಿ20 ಸರಣಿ ನಡೆಯುತ್ತಿದೆ. ಆದರೆ ನಾಲ್ಕನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಹೊರಗಿಟ್ಟ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಹಾಗೂ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಅವರು ಹೆಡ್‌ಕೋಚ್ ಗೌತಮ್ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡುವ ಕುರಿತು ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಗೌತಮ್ ಗಂಭೀರ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.

ವೈಭವ್ ಆಕ್ರಮಣಕಾರಿ ಬ್ಯಾಟಿಂಗ್
ಆಕ್ಲೆಂಡ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಹೊರಗಿಡಲಾಗಿತ್ತು. ಗಾಯದಿಂದ ಚೇತರಿಸಿಕೊಂಡ ಇಶಾನ್ ಕಿಶನ್ ತಂಡಕ್ಕೆ ಮರಳಿದ್ದರಿಂದ ವೈಭವ್ ಸ್ಥಾನ ಕಳೆದುಕೊಳ್ಳಬೇಕಾಯಿತು. ಇದಕ್ಕೂ ಮುನ್ನ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 45 ರನ್ ಬಾರಿಸಿ ತಮ್ಮ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಆದರೂ ಭಾರತ ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿದ್ದರೂ ಸಹ, ನಾಲ್ಕನೇ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಲಹೆ
ಈ ವಿಷಯದ ಕುರಿತು ಕ್ರಿಕ್‌ಬಜ್ ಜೊತೆ ಮಾತನಾಡಿದ ದಿನೇಶ್ ಕಾರ್ತಿಕ್ ಅವರು, ತಂಡಕ್ಕೆ ವೈಭವ್ ಸೂರ್ಯವಂಶಿ ಅವರನ್ನು ಸೇರಿಸಿಕೊಳ್ಳಬೇಕಾದರೆ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ತೆಗೆದುಹಾಕುವ ಅಗತ್ಯವಿಲ್ಲ. ಬದಲಾಗಿ ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡುವಂತೆ ಅವರು ಮ್ಯಾನೇಜ್‌ಮೆಂಟ್‌ಗೆ ಸೂಚಿಸಿದ್ದಾರೆ.
'ಸಂಜು ಸ್ಯಾಮ್ಸನ್ ಅವರನ್ನೇ ಬಲಿಪಶು ಮಾಡ್ಬೇಡಿ'
'ವೈಭವ್ ಸೂರ್ಯವಂಶಿ ಆಡಬೇಕೆಂದು ಇಡೀ ಜಗತ್ತು ಬಯಸುತ್ತದೆ ಎಂಬುದು ನನಗೆ ತಿಳಿದಿದೆ. ಒಂದು ವೇಳೆ ಮ್ಯಾನೇಜ್‌ಮೆಂಟ್‌ಗೆ ಅವರನ್ನು ಆಡಿಸುವ ಮನಸ್ಸಿದ್ದರೆ, ಅದು ಅಭಿಷೇಕ್ ಶರ್ಮಾ ಅವರ ಜಾಗದಲ್ಲಿರಬೇಕು. ಅಭಿಷೇಕ್‌ಗೆ ವಿಶ್ರಾಂತಿ ನೀಡಿ ವೈಭವ್‌ಗೆ ಅವಕಾಶ ನೀಡುವುದು ಸರಿಯಾದ ಕ್ರಮ. ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ವಿಚಾರ ಬಂದಾಗಲೆಲ್ಲಾ ಸಂಜು ಸ್ಯಾಮ್ಸನ್ ಅವರನ್ನೇ ಬಲಿಪಶು ಮಾಡುವುದು ಸರಿಯಲ್ಲ,' ಎಂದು ದಿನೇಶ್ ಕಾರ್ತಿಕ್ ಅವರು ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ಈ ಸರಣಿಯನ್ನು ಅತ್ಯುತ್ತಮವಾಗಿ ಆರಂಭಿಸಿದ್ದರು. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 33 ಎಸೆತಗಳಲ್ಲಿ 67 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಅವರು 14 ಮತ್ತು 18 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಲ್ಲದೆ ಮೂರನೇ ಟಿ20ಯಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಆರಂಭಿಕರಾಗಿ ಆಡಲು ಅವಕಾಶ ನೀಡಲು ಸ್ಯಾಮ್ಸನ್ ಅವರನ್ನು 3ನೇ ಕ್ರಮಾಂಕಕ್ಕೆ ಇಳಿಸಲಾಗಿತ್ತು.
ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 87 ರನ್‌ಗಳ ಬೃಹತ್ ಸೋಲು ಅನುಭವಿಸಿದ ಬೆನ್ನಲ್ಲೇ ತಂಡದ ಬ್ಯಾಟಿಂಗ್ ಸಂಯೋಜನೆಯ ಕುರಿತು ಈ ಚರ್ಚೆ ಮುನ್ನೆಲೆಗೆ ಬಂದಿದೆ. ಆ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಅವರ ಭರ್ಜರಿ ಶತಕದ (49 ಎಸೆತಗಳಲ್ಲಿ 107 ರನ್) ನೆರವಿನಿಂದ ನ್ಯೂಜಿಲೆಂಡ್ 259/7 ರನ್ ಕಲೆಹಾಕಿತ್ತು. ಉತ್ತರವಾಗಿ ಭಾರತ 172/9 ರನ್ ಕಲೆ ಹಾಕಲಷ್ಟೇ ಸಾಧ್ಯವಾಯಿತು.
ಐದು ಪಂದ್ಯಗಳ ಈ ಟಿ20 ಸರಣಿಯಲ್ಲಿ ಭಾರತ ಈಗಾಗಲೇ 3-1 ಅಂತರದ ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. ಹೀಗಾಗಿ ಅಂತಿಮ ಹಾಗೂ ಐದನೇ ಟಿ20 ಪಂದ್ಯವು ಮ್ಯಾನೇಜ್‌ಮೆಂಟ್‌ಗೆ ಮುಂಬರುವ ಸರಣಿಗಳಿಗಾಗಿ ತಮ್ಮ ತಂಡದ ಸಂಯೋಜನೆಯನ್ನು ಪರೀಕ್ಷಿಸಲು ಉತ್ತಮ ಅವಕಾಶವಾಗಿದೆ. ಒಟ್ಟಿನಲ್ಲಿ ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಬಲಿಪಶು ಮಾಡಬೇಡಿ ಎಂದು ಡಿಕೆ ಸಾಹೇಬ್ ಖಡಕ್ ಸಲಹೆ ನೀಡಿದ್ದಾರೆ.


Click it and Unblock the Notifications
