Yuzvendra Chahal: ಚಹಾಲ್ ಜೊತೆ ವಿಚ್ಛೇದನ ವದಂತಿ ಬಗ್ಗೆ ಮೌನ ಮುರಿದ ಧನಶ್ರೀ ವರ್ಮಾ
ಮಾಜಿ ಆರ್ ಸಿಬಿ ಬೌಲರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು ಇಬ್ಬರೂ ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿಗಳು ಇತ್ತಿಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ. ಇಬ್ಬರು ಬೇರೆ ಬೇರೆ ಇದ್ದು ಶೀಘ್ರದಲ್ಲೇ ಡಿವೋರ್ಸ್ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು, ಚಹಾಲ್ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡದೇ ಇದ್ದರೂ, ನಿಗೂಢಾರ್ಥ ಇರುವ ಸಂದೇಶವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಇಬ್ಬರೂ ಕೂಡ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದರು. ಯುಜ್ವೇಂದ್ರ ಚಹಾಲ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಧನಶ್ರೀ ಜೊತೆಗಿದ್ದ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಆದರೆ ಧನಶ್ರೀ ಮಾತ್ರ ಯುಜ್ವೇಂದ್ರ ಜೊತೆಗಿನ ಫೋಟೊಗಳನ್ನು ಡಿಲೀಟ್ ಮಾಡಿಲ್ಲ. ಈಗ ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.

ಧನಶ್ರೀ ವರ್ಮಾ ಹೇಳಿದ್ದೇನು?
ಕಳೆದ ಕೆಲವು ದಿನಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಕಷ್ಟವಾಗುತ್ತಿದೆ. ನಿಜ ಏನು ಎನ್ನುವುದನ್ನು ಪರಿಶೀಲನೆ ಮಾಡದೆ, ಆಧಾರರಹಿತವಾಗಿ ಬರೆಯುವುದು ಮತ್ತು ದ್ವೇಷವನ್ನು ಹರಡುವ ಟ್ರೋಲ್‌ಗಳಿಂದ ಅಪಪ್ರಚಾರ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.
ಸಮಾಜದಲ್ಲಿ ಗುರುತಿಸಿಕೊಳ್ಳಲು ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ಮೌನವಾಗಿರುವುದು ನನ್ನ ದೌರ್ಬಲ್ಯದ ಸಂಕೇತವಲ್ಲ, ಅದು ಶಕ್ತಿಯ ಸಂಕೇತ. ಆನ್‌ಲೈನ್‌ನಲ್ಲಿ ಸುಲಭವಾಗಿ ಕೆಟ್ಟದ್ದನ್ನು ಹರಡಬಹುದು. ಆದರೆ ಒಬ್ಬರನ್ನು ಮೇಲಕ್ಕೆತ್ತಲು ಧೈರ್ಯ ಮತ್ತು ಸಹಾನುಭೂತಿ ಬೇಕಾಗುತ್ತದೆ. ನಾನು ನನ್ನ ಮೌಲ್ಯಗಳೊಂದಿಗೆ ಮುಂದುವರೆಯುತ್ತೇನೆ, ಸತ್ಯಕ್ಕೆ ಸಮರ್ಥನೆಯ ಅಗತ್ಯವಿಲ್ಲ ಅದು ಎತ್ತರವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಚಹಾಲ್ ಇನ್‌ಸ್ಟಾಗ್ರಾಂ ಪೋಸ್ಟ್
ಮಂಗಳವಾರ ಚಹಾಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿಗೂಢ ಸಂದೇಶವನ್ನು ಪೋಸ್ಟ್ ಮಾಡಿದ್ದರು. "ಮೌನವು ಎಲ್ಲಾ ಶಬ್ದಗಳಿಗಿಂತಲೂ ಹೆಚ್ಚಾಗಿ ಅದನ್ನು ಕೇಳಬಲ್ಲವರಿಗೆ ಮಧುರವಾಗಿ" ಎಂದು ಸಾಕ್ರೆಟಿಸ್‌ರ ಬರವಣಿಗೆಯ ಸಾಲೊಂದನ್ನು ಹಂಚಿಕೊಂಡಿದ್ದರು.
ಇದಕ್ಕೂ ಮುನ್ನ ಶನಿವಾರ, "ಕಠಿಣ ಪರಿಶ್ರಮವು ಜನರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ತಿಳಿದಿದೆ. ನಿಮ್ಮ ನೋವು ನಿಮಗೆ ತಿಳಿದಿದೆ. ನೀವು ಇಲ್ಲಿಗೆ ತಲುಪಲು ಏನು ಮಾಡಿದ್ದೀರಿ ಎಂದು ನಿಮಗೆ ತಿಳಿದಿದೆ. ಜಗತ್ತಿಗೆ ತಿಳಿದಿದೆ. ನೀವು ಎತ್ತರವಾಗಿ ನಿಲ್ಲುತ್ತೀರಿ. ನಿಮ್ಮ ತಂದೆ ಮತ್ತು ತಾಯಿಯನ್ನು ಹೆಮ್ಮೆ ಪಡುವಂತೆ ಮಾಡಲು ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಿ. ಯಾವಾಗಲೂ ಹೆಮ್ಮೆಯ ಮಗನಂತೆ ಎತ್ತರವಾಗಿ ನಿಲ್ಲಿರಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಕೊನೆಗೂ ಸಿಕ್ಕಿಲ್ಲ ಸ್ಪಷ್ಟನೆ
ಇಬ್ಬರೂ ಹಲವು ಇನ್‌ಸ್ಟಾಗ್ರಾಂ ಸ್ಟೋರಿಗಳನ್ನು ಹಂಚಿಕೊಂಡಿದ್ದರು ನಾವು ಒಟ್ಟಾಗಿದ್ದೇವೆ, ವಿಚ್ಛೇದನ ಪಡೆಯುತ್ತಿಲ್ಲ ಎಂದು ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಡಿಸೆಂಬರ್ 22, 2020 ರಂದು ಈ ಜೋಡಿ ಗುರಗಾಂವ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮದುವೆಯಾಗಿದ್ದರು. ಧನಶ್ರೀ ವರ್ಮಾ ಡ್ಯಾನ್ಸರ್ ಮತ್ತು ದಂತವೈದ್ಯೆ ಕೂಡ ಆಗಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಭೇಟಿಯಾಗಿದ್ದ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು.












Click it and Unblock the Notifications