Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ದೆಹಲಿ ಕೋಚ್ ಮಹತ್ವದ ಹೇಳಿಕೆ
ವಿರಾಟ್ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ಉತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಅವರು ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಅರ್ಧಶತಕ, ಶತಕ ಸಾಮಾನ್ಯ ಎನ್ನುವಂತಾಗಿತ್ತು, ಆದರೆ ಈಗ ರನ್ ಗಳಿಸಲು ಪರದಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸೋತ ಬಳಿಕ ಅವರಿಗೆ ರಣಜಿಯಲ್ಲಿ ಆಡುವಂತೆ ಬಿಸಿಸಿಐ ಸೂಚನೆ ಕೊಟ್ಟಿತ್ತು, ರಣಜಿಯಲ್ಲಿ ದೆಹಲಿ ಪರ ಆಡಿದ ಅವರು ಅಲ್ಲೂ ರನ್ ಗಳಿಸುವಲ್ಲಿ ವಿಫಲವಾಗಿದ್ದರು.
ವಿರಾಟ್ ಕೊಹ್ಲಿ ರನ್ ಗಳಿಸಲು ವಿಫಲವಾದ ಬಳಿಕ ಅವರ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿರಾಟ್ ಕೊಹ್ಲಿ ರಣಜಿಯಲ್ಲಿ ಆಡಿದರೆ ಮಾತ್ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅವಕಾಶ ನೀಡುವುದಾಗಿ ಬಿಸಿಸಿಐ ಸೂಚನೆ ಕೊಟ್ಟಿದ್ದಾಗಿ ವರದಿ ಮಾಡಿತ್ತು, ಕಳೆದ ಎರಡು ವರ್ಷಗಳಿಂದ ಫಾರ್ಮ್ ಕಂಡುಕೊಳ್ಳಲು ವಿಫಲವಾಗಿದ್ದರಿಂದ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದ್ದು ಈ ಬಗ್ಗೆ ದೆಹಲಿ ತಂಡದ ಕೋಚ್ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿ ತಂಡದ ಹೆಡ್ ಕೋಚ್ ಆಗಿರುವ ಸರಣ್ ದೀಪ್ ಸಿಂಗ್ ಈ ಬಗ್ಗೆ ಮಾತನಾಡಿ, ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಆಡುವುದನ್ನು ಮುಂದುವರೆಸಲಿದ್ದಾರೆ. ಮುಂದಿನ ವರ್ಷ ಕೂಡ ಅವರು ದೆಹಲಿ ಪರವಾಗಿ ಆಡಲಿದ್ದಾರೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಬಿಸಿಸಿಐ ದೇಶೀಯ ಕ್ರಿಕೆಟ್‌ನಲ್ಲಿ ಆಡುವಂತೆ ಸೂಚನೆ ಕೊಟ್ಟಿದೆ. ವಿರಾಟ್ ಕೊಹ್ಲಿ ಮುಂದೆ ದೆಹಲಿ ತಂಡಕ್ಕಾಗಿ ಆಡಲಿದ್ದಾರೆ. ಅವರಿಗೆ ಬದ್ಧತೆ ಇದ್ದು ಅವಕಾಶ ಸಿಕ್ಕಾಗಲೆಲ್ಲಾ ದೆಹಲಿ ತಂಡಕ್ಕಾಗಿ ಆಡಲಿದ್ದಾರೆ ಎಂದು ಸರಣ್ ದೀಪ್ ಸಿಂಗ್ ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯಿಂದ ಕೊಹ್ಲಿಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಸಮಯ ಸಿಗುತ್ತಿಲ್ಲ. ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ. ಅವರಿಗೆ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಸಮಯ ಬೇಕು ಆದ್ದರಿಂದಲೇ ಅವರು ದೆಹಲಿ ತಂಡಕ್ಕಾಗಿ ಆಡಿಯೇ ಆಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಅವಕಾಶ ಸಿಕ್ಕರೆ ಅವರು ಖಂಡಿತವಾಗಿ ಆಡಲಿದ್ದಾರೆ ಎಂದರು.
ದೇಶೀಯ ಕ್ರಿಕೆಟ್ ಅನ್ನು ವಿರಾಟ್ ಕೊಹ್ಲಿ ಹೆಚ್ಚು ಪ್ರೀತಿಸುತ್ತಾರೆ ಮತ್ತು ಆಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಈ ಮೂಲಕ ಕೊಹ್ಲಿ ಶೀಘ್ರದಲ್ಲೇ ನಿವೃತ್ತಿ ಹೊಂದುತ್ತಾರೆ ಎನ್ನುವ ವದಂತಿಗಳಿಗೆ ತೆರೆ ಎಳೆದಿದ್ದಾರೆ. ವಿರಾಟ್ ಕೊಹ್ಲಿ ಸದ್ಯ ಇಂಗ್ಲೆಂಡ್ ವಿರುದ್ಧ ಫೆಬ್ರವರಿ 6 ರಿಂದ ಆರಂಭವಾಗಲಿರು ಏಕದಿನ ಸರಣಿಗೆ ತಯಾರಿ ನಡೆಸುತ್ತಿದ್ದಾರೆ.












Click it and Unblock the Notifications