Karun Nair: ಭರ್ಜರಿ ಬ್ಯಾಟಿಂಗ್ ಬಳಿಕ ಕನ್ನಡಿಗ ಕರುಣ್ ನಾಯರ್ ಹೇಳಿದ್ದೇನು?
ಕನ್ನಡಿಗ ಕರುಣ್ ನಾಯರ್ ಐಪಿಎಲ್ 2025ರಲ್ಲಿ ಭರ್ಜರಿಯಾಗಿ ವಾಪಸಾತಿ ಮಾಡಿದ್ದಾರೆ. ಮೆಗಾ ಹರಾಜಿನಲ್ಲಿ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿದ್ದ ಕನ್ನಡಿಗ ಒಂದೇ ಒಂದು ಅವಕಾಶಕ್ಕಾಗಿ ಕಾದು ಕೂತಿದ್ದರು. ಕೊನೆಗೂ ಅವರ ಬೇಡಿಕೆ ಈಡೇರಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡರು. ಇಡೀ ಕ್ರಿಕೆಟ್ ಜಗತ್ತು ಅವರ ಬಗ್ಗೆ ಮಾತನಾಡುವಂತೆ ಮಾಡಿದರು.
2022ರಲ್ಲಿ "ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು" ಎಂದು ಕರುಣ್ ನಾಯರ್ ಟ್ವೀಟ್ ಮಾಡಿದ್ದರು. ಅವಕಾಶ ಸಿಗಲಿ ಅಭ್ಯಾಸ ಮಾಡೋಣ ಎಂದು ಕಾಯುತ್ತಾ ಕೂರಲಿಲ್ಲ, ಕಠಿಣವಾಗಿ ಅಭ್ಯಾಸ ಮಾಡಿದರು. ದೇಶೀಯ ಕ್ರಿಕೆಟ್‌ನಲ್ಲಿ ದಾಖಳೆಗಳನ್ನು ಬರೆದರು. ಆದರೂ ಐಪಿಎಲ್‌ನಂತಹ ವೇದಿಕೆ ಮೇಲೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಗಾಯಗೊಂಡಿದ್ದರಿಂದ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್ ನಾಯರ್, ಮುಂಬೈ ಇಂಡಿಯನ್ಸ್ ಆಟಗಾರರ ಬೆವರಿಳಿಸಿದರು. ಜಸ್ಪ್ರೀತ್ ಬುಮ್ರಾ ಅವರಿಗೆ 9 ಎಸೆತಗಳಲ್ಲಿ 26 ರನ್ ಗಳಿಸಿದ್ದು ನೋಡಿ ಎಲ್ಲರೂ ಅಚ್ಚರಿಗೊಂಡರು.
40 ಎಸೆತಗಳಲ್ಲಿ 89 ರನ್ ಗಳಿಸಿ ಕರುಣ್ ನಾಯರ್, ತನ್ನ ಸಾಮರ್ಥ್ಯವೇನು ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದ್ದು, ಇದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಎರಡು ವರ್ಷ ಐಪಿಎಲ್‌ನಿಂದ ದೂರವಿದ್ದರೂ ಅವರು ತಮ್ಮ ಬ್ಯಾಟಿಂಗ್ ಸುಧಾರಣೆಯತ್ತ ಕೆಲಸ ಮಾಡಿದ್ದು ಮೊದಲ ಪಂದ್ಯದಲ್ಲೇ ಗೊತ್ತಾಗಿದೆ.
ತಯಾರಿ ಬಗ್ಗೆ ಕರುಣ್ ನಾಯರ್ ಹೇಳಿದ್ದೇನು?
ದೇಶೀಯ ಋತುವಿನಲ್ಲಿ ವಿದರ್ಭ ಪರ 1870 ರನ್‌ಗಳನ್ನು ಕಲೆಹಾಕಿದಾಗ ತಾನು ಅದಕ್ಕಾಗಿ ಮಾಡಿಕೊಂಡಿ ತಯಾರಿ ಬಗ್ಗೆ ಕರುಣ್ ನಾಯರ್ ಮಾತನಾಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಐಪಿಎಲ್‌ನಲ್ಲಿ ಆಡಿದ್ದೇನೆ, ಅಲ್ಲಿ ಹೇಗಿರುತ್ತದೆ ಎನ್ನುವುದು ನನಗೆ ತಿಳಿದಿದೆ. ಹೊಸ ಸವಾಲನ್ನು ಎದುರಿಸುತ್ತೇನೆ ಎನ್ನುವ ವಿಶ್ವಾಸ ನನಗಿತ್ತು" ಎಂದು ಹೇಳಿದ್ದಾರೆ.
"ಅವಕಾಶ ಸಿಕ್ಕ ಬಳಿಕ ಅಲ್ಲಿ ಹೋಗಿ ಕೆಲವು ಎಸೆತಗಳನ್ನು ಎದುರಿಸಿ ವೇಗವಾಗಿ ರನ್ ಗಳಿಸುವ ಮತ್ತು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಬಗ್ಗೆ ಮಾತ್ರ ಯೋಚಿಸಿದ್ದೆ" ಎಂದು ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಕೊನೆಯ ಬಾರಿಗೆ 2022 ರ ಐಪಿಎಲ್‌ನಲ್ಲಿ ಅವರು ಆಡಿದ್ದರು.
ಎಲ್ಲವೂ ಚೆನ್ನಾಗಿ ನಡೆಯಿತು, ಮತ್ತು ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನ ತಂಡ ಗೆಲುವು ಸಾಧಿಸಿದ್ದರೆ ನನಗೆ ಮತ್ತಷ್ಟು ಖುಷಿಯಾಗುತ್ತಿತ್ತು ಎಂದಿದ್ದಾರೆ.
ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಲಿಲ್ಲ ಆದರೆ ನನ್ನ ಅವಕಾಶ ಬರುತ್ತದೆ ಮತ್ತು ಅದಕ್ಕಾಗಿ ಸಿದ್ಧವಾಗಿರಬೇಕು ಎನ್ನುವುದನ್ನು ಮನಗಂಡಿದ್ದೆ. ನಮ್ಮ ಪ್ರಮುಖ ಆಟಗಾರ ಗಾಯಗೊಂಡಿದ್ದಾರೆ ಎಂದು ನನಗೆ ತಿಳಿದಿತ್ತು, ಹೊರಗೆ ಕುಳಿತಿರುವ ನಮ್ಮಲ್ಲಿ ಕೆಲವೇ ಬ್ಯಾಟ್ಸ್‌ಮನ್‌ಗಳು ಯಾವುದೇ ಸಮಯದಲ್ಲಿ ಸಿದ್ಧರಾಗಿರಬೇಕು ಎಂದರು. ಮಾನಸಿಕವಾಗಿ, ನಾನು ಸಿದ್ಧನಾಗಿದ್ದೆ ಮತ್ತು ಅವಕಾಶ ಬರುವುದಕ್ಕೆ ಎದುರು ನೋಡುತ್ತಿದ್ದೆ ಎಂದಿದ್ದಾರೆ.












Click it and Unblock the Notifications