ಉದ್ಘಾಟನೆಗೆ ಸಿದ್ಧವಾದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವಿಶೇಷತೆಗಳು
ಬೆಂಗಳೂರು, ಆಗಸ್ಟ್ 04: ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಉದ್ಘಾಟನೆಗೆ ಸಿದ್ಧವಾಗಿದೆ. ನಿರ್ಮಾಣ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಎನ್‌ಸಿಎ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ, ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ಹೊಸ ಎನ್‌ಸಿಎ ನಿರ್ಮಾಣ ಮಾಡಲಾಗಿದೆ.

ಜಯ್ ಶಾ ತಮ್ಮ ಖಾತೆಯಲ್ಲಿ, "ಬಿಸಿಸಿಐನ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ. ಇದು ದೇಶದ ಪ್ರಸ್ತುತ ಮತ್ತು ಭವಿಷ್ಯದ ಕ್ರಿಕೆಟಿಗರು ಉತ್ತಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡಲಿದೆ" ಎಂದು ಬರೆದಿದ್ದಾರೆ.
"ಎನ್‌ಸಿಎನಲ್ಲಿ ಮೂರು ವಿಶ್ವದರ್ಜೆಯ ಆಟದ ಮೈದಾನ, 45 ಅಭ್ಯಾಸ ಪಿಚ್, ಒಳಾಂಗಣ ಕ್ರಿಕೆಟ್ ಪಿಚ್, ಒಲಂಪಿಕ್ ಮಾದರಿ ಈಜುಕೊಳ, ತರಬೇತಿ ಸೇರಿದಂತೆ ವಿವಿಧ ಸೌಲಭ್ಯಗಳಿವೆ" ಎಂದು ಜಯ್ ಶಾ ಹೇಳಿದ್ದಾರೆ. ಹೊಸ ಎನ್‌ಸಿಎಯ ನಾಲ್ಕು ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ.
ಸ್ಟೇಡಿಯಂ ಪಕ್ಕದಲ್ಲಿಯೇ ಇದೆ: ಬೆಂಗಳೂರು ನಗರದಲ್ಲಿರುವ ಸದ್ಯ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಚಿನ್ನಸ್ವಾಮಿ ಸ್ಟೇಡಿಯಂಗೆ ಹೊಂದಿಕೊಂಡಿದೆ. ಆದರೆ ಹೊಸ ಎನ್‌ಸಿಎಯನ್ನು ವಿಮಾನ ನಿಲ್ದಾಣ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿದೆ. ಬಿಸಿಸಿಐ ಇದರ ಉದ್ಘಾಟನೆ ಬಳಿಕ ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯದಲ್ಲಿ ಹೊಸ ಎನ್‌ಸಿಎ ನಿರ್ಮಾಣ ಮಾಡುವ ಗುರಿ ಹೊಂದಿದೆ.
ಕ್ರಿಕೆಟ್ ಆಟಗಾರರ ಕೌಶಲ್ಯ ಬೆಳಸುವಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪಾತ್ರ ಬಹಳ ದೊಡ್ಡದು. ಅದರಲ್ಲೂ ಕ್ರಿಕೆಟಿಗರು ಗಾಯಗೊಂಡ ಬಳಿಕ ಅವರು ಚೇತರಿಸಿಕೊಂಡು ಫಾರ್ಮ್‌ಗೆ ಮರಳಲು ಅಕಾಡೆಮಿ ಸಹಾಯಕವಾಗಿದೆ. ಫಾರ್ಮ್ ಮರಳಿ ಪಡೆಯಲು, ತರಬೇತಿ ಪಡೆಯಲು ಎನ್‌ಸಿಎ ಅನುಕೂಲ ಮಾಡಿಕೊಡುತ್ತದೆ. ಹೊಸ ಎನ್‌ಸಿಎಯನ್ನು ಸುಮಾರು 45 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.
ಇತ್ತೀಚೆಗೆ ಜಸ್ಟ್ರೀತ್ ಬೂಮ್ರಾ, ರಿಷಬ್ ಪಂತ್ ಬೆಂಗಳೂರಿನ ಎನ್‌ಸಿಎಯಲ್ಲಿ ತರಬೇತಿಯನ್ನು ಪಡೆದು ಫಾರ್ಮ್‌ಗೆ ಮರಳಿದ್ದಾರೆ. ಆದರೆ ಈಗಿರುವ ಎನ್‌ಸಿಎಗಿಂತ ಅತ್ಯಾಧುನಿಕ ಸೌಲಭ್ಯಗಳನ್ನು ಒಂಗೊಂಡ ಹೊಸ ಎನ್‌ಸಿಎಯನ್ನು ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡಲಾಗಿದ್ದು, ಅದು ಉದ್ಘಾಟನೆಗೆ ಸಿದ್ಧವಾಗಿದೆ.
ತಂಡಗಳು ಅಂತರಾಷ್ಟ್ರೀಯ ಪ್ರವಾಸಗಳನ್ನು ಕೈಗೊಳ್ಳುವ ಮೊದಲು ತರಬೇತಿಯನ್ನು ಎನ್‌ಸಿಎನಲ್ಲಿ ನೀಡಲಾಗುತ್ತದೆ. ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈ ಪ್ರವಾಸಕ್ಕೂ ಮುನ್ನ ಬೆಂಗಳೂರಿನ ಎನ್‌ಸಿಎಯಲ್ಲಿ ತರಬೇತಿಯನ್ನು ಪಡೆದಿತ್ತು, ಇಲ್ಲಿ ಅಭ್ಯಾಸವನ್ನು ನಡೆಸಿತ್ತು.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಅಧ್ಯಕ್ಷರು ಇರುತ್ತಾರೆ. ಅವರ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಸದ್ಯ ಬೆಂಗಳೂರು ನಗರದಲ್ಲಿರುವ ಎನ್‌ಸಿಎಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಧ್ಯಕ್ಷರು. ಅವರ ಅವಧಿ ಶೀಘ್ರವೇ ಮುಕ್ತಾಯವಾಗಲಿದೆ.












Click it and Unblock the Notifications