Aus vs Afg: ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಅಫ್ಘಾನಿಸ್ತಾನ? ಗೆದ್ದವರು ಸೆಮಿಫೈನಲ್‌ಗೆ
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಶಾಕ್ ನೀಡಿ ಸೆಮಿಫೈನಲ್ ರೇಸ್‌ನಿಂದ ಹೊರದಬ್ಬಿರುವ ಅಫ್ಘಾನಿಸ್ತಾನ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಅಫ್ಘಾನಿಸ್ತಾನಕ್ಕೆ ಸಿಕ್ಕಿದೆ.
ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಇಂಗ್ಲೆಂಡ್ ವಿರುದ್ಧ 8 ರನ್‌ಗಳ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಏನಾದರೂ ಗೆಲುವು ಸಾಧಿಸಿದರೆ, ಅಫ್ಘಾನಿಸ್ತಾನ ಸೆಮಿಫೈನಲ್ ತಲುಪಲಿದ್ದು, ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬೀಳಲಿದೆ.

ಗಡಾಫಿ ಸ್ಟೇಡಿಯಂ ಹವಾಮಾನ ವರದಿ
ಈಗಾಗಲೇ ಪಾಕಿಸ್ತಾನದಲ್ಲಿ ಎರಡು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಮಳೆಗೆ ಆಹುತಿಯಾಗಿವೆ, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಎರಡೂ ತಂಡಗಳಿಗೆ 1 ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಶುಕ್ರವಾರ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಪಂದ್ಯ ನಡೆಯುವ ಸೂಚನೆ ಸಿಕ್ಕಿದೆ.
ಸೋಲಿನ ಸೇಡು ತೀರಿಸಿಕೊಳ್ಳಲು ಕಾತರ
2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ 292 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 91 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಒಂದು ಕಡೆ ನಿಂತು ಅಮೋಘ ಪ್ರದರ್ಶನ ನೀಡಿದ್ದರು. ಅಫ್ಘಾನಿಸ್ತಾನದ ಗೆಲುವಿಗೆ ಅಡ್ಡವಾಗಿ ನಿಂತಿದ್ದು ಗ್ಲೆನ್ ಮ್ಯಾಕ್ಸ್‌ವೆಲ್, 128 ಎಸೆತಗಳಲ್ಲಿ 21 ಬೌಂಡರಿ 10 ಸಿಕ್ಸರ್ ಸಹಿತ ಅಜೇಯ 201 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಕ್ರಿಕೆಟ್ ಇತಿಹಾಸದ ರೋಚಕ ಪಂದ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅಫ್ಗಾನಿಸ್ತಾನ ಆಸ್ಟ್ರೇಲಿಯಾವನ್ನು ಮಣಿಸಿದರೆ, ತಾನು ಸೆಮಿಫೈನಲ್ ತಲುಪುವ ಜೊತೆಗೆ ಆಸ್ಟ್ರೇಲಿಯಾವನ್ನು ಪಂದ್ಯಾವಳಿಯಿಂದಲೇ ಹೊರದೂಡಬಹುದು. ಇಂಗ್ಲೆಂಡ್ ವಿರುದ್ಧ ಗೆಲುವಿನ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಅಫ್ಘಾನಿಸ್ತಾನ ಆಸ್ಟ್ರೇಲಿಯಾವನ್ನು ಮಣಿಸುವ ಉತ್ಸಾಹದಲ್ಲಿದೆ.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಸೆದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ ಜಾಯ್, ಗುಲ್ಬಾದಿನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ.
ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರಶುಯಿಸ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ಸ್ಪೆನ್ಸರ್ ಜಾನ್ಸನ್.












Click it and Unblock the Notifications