Asia Cup 2022: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಈ ಪ್ರಮುಖ ಅಂಶಗಳೇ ಕಾರಣ!
ದುಬೈನಲ್ಲಿ ಭಾನುವಾರ ನಡೆದ ಏಷ್ಯಾಕಪ್‌ನ ರೋಚಕ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್‌ಗಳ ಗೆಲುವು ದಾಖಲಿಸಿತು. ಏಷ್ಯಾಕಪ್ ಟೂರ್ನಿಯ ಆರಂಭದ ಪಂದ್ಯದಲ್ಲಿ ಸೋಲಿನ ಸೇಡನ್ನು ತೀರಿಸಿಕೊಂಡಿದೆ. 182 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಸೋಲಿಸಿದೆ.
ಉತ್ತಮ ರನ್ ಕಲೆ ಹಾಕಿಯೂ ಭಾರತ ತಂಡದ ಬೌಲರ್ ಗಳ ನೀರಸ ಪ್ರದರ್ಶನದಿಂದ ಸೋಲಿನ ರುಚಿ ಕಂಡಿದೆ. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಭಾರತದ ಆರಂಭಿಕ ಬ್ಯಾಟರ್ ಗಳು ಉತ್ತಮವಾಗಿ ಇನ್ನಿಂಗ್ಸ್ ಆರಂಭಿಸಿದರು. ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
5.1 ಓವರ್ ಗಳಲ್ಲಿ ಈ ಜೋಡಿ 54 ರನ್ ಕಲೆ ಹಾಕುವ ಮೂಲಕ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆ ನೀಡಿರು. 16 ಎಸೆತಗಳಲ್ಲಿ 28 ರನ್ ಗಳಿಸಿದ್ದ ರೋಹಿತ್ ಶರ್ಮಾ ಹ್ಯಾರಿಸ್ ರೌಫ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಕೂಡ 28 ರನ್ ಗಳಿಸಿ ಔಟಾದರು.

ತಂಡಕ್ಕೆ ಆಸರೆಯಾದ ವಿರಾಟ್ ಕೊಹ್ಲಿ
ಏಷ್ಯಾಕಪ್ ಆರಂಭದಿಂದಲೂ ರನ್ ಗಳಿಸುತ್ತಿರುವ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮತ್ತೊಂದೆಡೆ ವಿಕೆಟ್ ಬೀಳುತ್ತಿದ್ದರೂ ಕೊನೆಯವರೆಗೂ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 4 ಬೌಂಡರಿ ಒಂದು ಸಿಕ್ಸರ್ ಸಹಿತ 60 ರನ್ ಗಳಿಸಿದರು.
ಕೊನೆಯ ಓವರ್ ವರೆಗು ಆಡಿದ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅಂತ್ಯಕ್ಕೆ ಇನ್ನೂ ಎರಡು ಬಾಲ್ ಇರುವಾಗ ರನೌಟ್‌ಗೆ ಬಲಿಯಾದರು. ಇದು ವಿರಾಟ್‌ಕೊಹ್ಲಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಗಳಿಸಿದ 32ನೇ ಅರ್ಧಶತಕವಾಗಿದೆ.

ಉತ್ತಮ ಪ್ರದರ್ಶನ ನೀಡದ ಮಧ್ಯಮ ಕ್ರಮಾಂಕ
ಮಧ್ಯಮ ಕ್ರಮಾಂಕದಲ್ಲಿ ಭಾರತ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಉತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ 13 ರನ್ ಗಳಿಸಿ ಔಟಾದರೆ, ದಿನೇಶ್ ಕಾರ್ತಿಕ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ರಿಷಬ್ ಪಂತ್ ಕೇವಲ 14 ರನ್ ಗಳಿಸಿ ಔಟಾದರು.
ಇನ್ನೂ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತವನ್ನು ಗೆಲ್ಲಿಸಿದ್ದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾಗಿದ್ದು ದೊಡ್ಡ ಹಿನ್ನಡೆಯಾಯಿತು. ದೀಪಕ್ ಹೂಡಾ 16 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ಭಾರತ ಅಂತಿಮವಾಗಿ 20 ಓವರ್ ಗಳಲ್ಲಿ 181 ರನ್ ಗಳಿಸಿತು.

ಪರದಾಡಿದ ಭಾರತದ ಬೌಲರ್ ಗಳು
ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂರನ್ನು ಔಟ್ ಮಾಡುವ ಮೂಲಕ ಸ್ಪಿನ್ನರ್ ರವಿ ಬಿಷ್ಟೋಯಿ ಆರಂಭಿಕ ಆಘಾತ ನೀಡಿದರು. ನಂತರ ಬಂದ ಫಖಾರ್ ಜಮಾನ್ ಕೂಡ 15 ರನ್ ಗಳಿಸಿ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮೊಹಮ್ಮದ್ ನವಾಜ್ ಭಾರತ ಬೌಲರ್ ಗಳ ಬೆವರಿಸಿಳಿಸಿದರು, ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ಉತ್ತಮ ರನ್ ಕಲೆ ಹಾಕಿದರು. 20 ಎಸೆತಗಳಲ್ಲಿ 6 ಬೌಂಡರಿ ಎರಡು ಸಿಕ್ಸರ್ ನೆರವಿನಿಂದ 42 ರನ್ ಗಳಿಸಿ ಪಾಕಿಸ್ತಾನ ಗೆಲವಿನಲ್ಲಿ ಮಹತ್ವದ ಪಾತ್ರ ವಹಿಸಿದರು.ಮಹಮ್ಮದ್ ರಿಜ್ವಾನ್ 71 ರನ್ ಗಳಿಸಿದರೆ, ಕೊನೆಯಲ್ಲಿ ಖುಶ್ದಿಲ್ ಶಾ ಮತ್ತು ಆಸಿಫ್ ಅಲಿ ತಲಾ 14 ರನ್ ಮತ್ತು 16 ರನ್ ಗಳಿಸುವ ಮೂಲಕ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು.
ಹಾರ್ದಿಕ್ ಪಾಂಡ್ಯ 4 ಓವರ್ ಗಳಲ್ಲಿ 44 ರನ್ ಬಿಟ್ಟುಕೊಟ್ಟರ್, ಚಹಾಲ್ 4 ಓವರ್ ಗಳಲ್ಲಿ 43 ರನ್ ಬಿಟ್ಟುಕೊಟ್ಟರೆ, ಭುವನೇಶ್ವರ್ ಕುಮಾರ್ 4 ಓವರ್ ಗಳಲ್ಲಿ 40 ರನ್ ಬಿಟ್ಟುಕೊಟ್ಟಿದ್ದು ಭಾರತದ ಸೋಲಿಗೆ ಕಾರಣವಾಯಿತು.

ಭಾರತದ ಸೋಲಿಗೆ ಇದೇ ಕಾರಣ!
ಭಾರತ ತಂಡ ಸೋತ ಬಳಿಕ ಸೋಲಿಗೆ ಕಾರಣವಾದ ಹಲವು ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿ ಕಾಡಿತು. ಅವೇಶ್ ಖಾನ್ ಅಲಭ್ಯರಾಗಿದ್ದು, ಭಾರತದ ವೇಗದ ಬೌಲಿಂಗ್ ಶಕ್ತಿ ಕಡಿಮೆ ಮಾಡಿತು. ದೀಪಕ್ ಹೂಡಾಗೆ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ.
ಇನ್ನು ಮುಖ್ಯವಾಗಿ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡದಿರುವುದೇ ಸೋಲಿಗೆ ಮುಖ್ಯ ಕಾರಣ ಎನ್ನಲಾಗಿದೆ. ಅಂತಿಮ ಓವರ್ ಗಳಲ್ಲಿ ವೇಗವಾಗಿ ರನ್ ಗಳಿಸುವ ದಿನೇಶ್ ಕಾರ್ತಿಕ್ ಅನುಪಸ್ಥಿತಿಯಿಂದ 200 ರನ್ ಗಡಿ ದಾಟುವ ಹಂತದಲ್ಲಿದ್ದ ಭಾರತ 181 ರನ್ ಗಳಿಸಲು ಸಾಧ್ಯವಾಯಿತು ಎನ್ನಲಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಹಾರ್ದಿಕ್ ಪಾಂಡ್ಯ ವಿಫಲರಾಗಿದ್ದು ಸೋಲಿಗೆ ಮತ್ತೊಂದು ಪ್ರಮುಖ ಕಾರಣ.












Click it and Unblock the Notifications