Robin Uthappa: ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ಉದ್ಯೋಗಿಗಳಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕನ್ನಡಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ಉತ್ತಪ್ಪ ನಡೆಸುತ್ತಿದ್ದ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಉದ್ಯೋಗಿಗಳಿಗೆ ಪಿಎಫ್ ಹಣ ಪಾವತಿಸದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಉದ್ಯೋಗಿಗಳಿಗೆ ಪಿಎಫ್ ಹಣ ಪಾವತಿಸದೇ ಸುಮಾರು 23 ಲಕ್ಷ ರೂಪಾಯಿ ವಂಚಿಸಿದ ಆರೋಪವಿದೆ. ಹೀಗಾಗಿ ಉತ್ತಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.
ಬೆಂಗಳೂರಿನ ಪುಲಕೇಶಿ ನಗರ ಪೊಲೀಸರಿಗೆ ಪಿಎಫ್‌ಓ ರಿಜಿನಲ್ ಕಮಿಷನರ್ ಷಡಾಕ್ಷಿರಿ ಗೋಪಾಲ ರೆಡ್ಡಿಯವರು ಈ ಕುರಿತು ಪತ್ರ ಬರೆದಿರುವುದು ತಿಳಿದು ಬಂದಿದೆ. ಡಿಸೆಂಬರ್ ಮೊದಲ ವಾರದಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಉತ್ತಪ್ಪ ಪುಲಕೇಶಿ ನಗರದವರಾಗಿದ್ದರಿಂದ ಅರೆಸ್ಟ್ ವಾರೆಂಟ್ ಅನ್ನು ಪುಲಕೇಶಿ ನಗರ ಪೊಲೀಸ್ ಠಾಣೆಗೆ ರವಾನಿಸಲಾಗಿದೆ.

ಪಿಎಫ್‌ಓ ರಿಜಿನಲ್ ಕಮಿಷನರ್ ಷಡಾಕ್ಷಿರಿ ಗೋಪಾಲ ರೆಡ್ಡಿಯವರಿಂದ ಪತ್ರ ಸ್ವೀಕರಿಸಿದ ಪೊಲೀಸರು ರಾಬಿನ್ ಉತ್ತಪ್ಪ ಅವರಿಗಾಗಿ ಹುಟುಕಾಟ ನಡೆಸಿದ್ದರು. ಆ ಬಳಿಕ ತಮ್ಮ ವ್ಯಾಪ್ತಿಯಲ್ಲಿ ಉತ್ತಪ್ಪ ವಾಸವಿಲ್ಲವೆಂದು ಪಿಎಫ್ಓ ರಿಜಿನಲ್ ಕಮಿಷನರ್‌ಗೆ ಮಾಹಿತಿ ನೀಡಿದ್ದಾರೆ ಪೊಲೀಸರು. ಹಾಗಿದ್ದರೆ ರಾಬಿನ್ ಉತ್ತಪ್ಪ ಎಲ್ಲಿದ್ದಾರೆ?
ರಾಬಿನ್ ಉತ್ತಪ್ಪ ಕಳೆದ ಒಂದು ವರ್ಷದಿಂದ ತನ್ನ ಕುಟುಂಬದೊಂದಿಗೆ ದುಬೈನಲ್ಲಿ ವಾಸವಾಗಿದ್ದಾರೆನ್ನುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಎರಡು ವರ್ಷದ ಹಿಂದೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ರಾಬಿನ್ ಉತ್ತಪ್ಪ ಸದ್ಯ ಕೇವಲ ವೀಕ್ಷಕರಾಗಿದ್ದಾರೆ. ಹಾಗಾದರೆ ಬೆಂಗಳೂರು ತೊರೆದಿದ್ದು ಯಾಕೆ ರಾಬಿನ್ ಉತ್ತಪ್ಪ?
ಬೆಂಗಳೂರು ಟ್ರಾಫಿಕ್‌ನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ತಮ್ಮ ಮಕ್ಕಳು ನಿಂತು ಕಷ್ಟಪಡಬಾರದು ಎನ್ನುವ ಕಾರಣಕ್ಕೆ ರಾಬಿನ್ ಉತ್ತಪ್ಪ ಊರು ತೊರೆದಿರುವುದಾಗಿ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದರು. ಇಷ್ಟೊಂದು ಟ್ರಾಫಿಕ್ ಇರುವ ಸ್ಥಳದಲ್ಲಿ ತಮ್ಮ ಮಕ್ಕಳು ಇರುವುದು ಸರಿ ಅಲ್ಲ ಎಂದು ರಾಬಿನ್ ಬೆಂಗಳೂರು ತೊರೆದಿರುವುದಾಗಿ ಹೇಳಿಕೊಂಡಿದ್ದರು.
ಆದರೂ ನನ್ನ ಪ್ರೀತಿಯ ಸಿಟಿ ಬೆಂಗಳೂರೇ ಆಗಿದೆ ಎಂದು ರಾಬಿನ್ ಹೇಳಿಕೊಂಡಿದ್ದರು. ಆದರೆ ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ನಿಮಗೆಲ್ಲಾ ದುಡ್ಡು ಮಾಡೋಕೆ ಮಾತ್ರ ಬೆಂಗಳೂರು ಬೇಕು ಎಂದು ಕಾಮೆಂಟ್ ಮಾಡಿ ಕಿಡಿ ಕಾರಿದ್ದರು.












Click it and Unblock the Notifications