ಶುಭಮನ್ ಗಿಲ್‌ಗೆ ನಾಯಕನಾಗುವ ಅರ್ಹತೆಯಿಲ್ಲ ಎಂದ ಮಾಜಿ ಕ್ರಿಕೆಟಿಗ
ಶುಭಮನ್ ಗಿಲ್‌ರಲ್ಲಿ ನಾಯಕತ್ವದ ಗುಣಗಳಿಲ್ಲ, ಆತನಿಗೆ ತಂಡವನ್ನು ಮುನ್ನಡೆಸುವ ಕೌಶಲ್ಯಗಳು ಇಲ್ಲ ಎಂದು ಭಾರತ ತಂಡದ ಮಾಜಿ ಆಟಗಾರ ಅಮಿತ್ ಮಿಶ್ರಾ ಹೇಳಿದ್ದಾರೆ.
ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅಮಿತ್ ಮಿಶ್ರಾ, ಗಿಲ್ ಅವರ ನಾಯಕತ್ವದ ಕೌಶಲ್ಯವನ್ನು ಪ್ರಶ್ನೆ ಮಾಡಿದ್ದು, ಅವರ ನಾಯಕತ್ವದಲ್ಲಿ ಗುಜರಾತ್ ಟೈಟಾನ್‌ನ ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ ಎಂದಿದ್ದಾರೆ.

ಟೀಮ್ ಇಂಡಿಯಾಗೆ ಭವಿಷ್ಯದ ನಾಯಕನಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನಾನು ಶುಭ್‌ಮಾನ್ ಅವರನ್ನು ನಾಯಕನನ್ನಾಗಿ ಮಾಡುವುದಿಲ್ಲ ಏಕೆಂದರೆ ನಾನು ಅವರನ್ನು ಐಪಿಎಲ್‌ನಲ್ಲಿ ನೋಡಿದ್ದೇನೆ. ಅವರಿಗೆ ನಾಯಕತ್ವವನ್ನು ಹೇಗೆ ಮಾಡಬೇಕೆಂದು ತಿಳಿದಿಲ್ಲ, ಅವರಿಗೆ ನಾಯಕತ್ವದ ಕಲ್ಪನೆಯೂ ಇಲ್ಲ ಎಂದು ಹೇಳಿದ್ದಾರೆ.
ಐಪಿಎಲ್ 2024ರ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಬಳಿಕ ಗಿಲ್ ನಾಯಕರಾಗಿ ನೇಮಕವಾದರು. ಅವರ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
14 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು. ತಮ್ಮ ಮೊದಲ ಋತುವಿನಲ್ಲಿ ಚಾಂಪಿಯನ್ ಆಗಿದ್ದ ಟೈಟಾನ್ಸ್, ಎರಡನೇ ವರ್ಷ ರನ್ನರ್ ಅಪ್ ಆಗಿತ್ತು. ಆದರೆ 2024ರ ಆವೃತ್ತಿಯಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ಸು
ಅಮಿತ್ ಮಿಶ್ರಾ ಟೀಕೆಯ ನಡುವೆ, ಶುಭಮನ್ ಗಿಲ್ ಟೀಂ ಇಂಡಿಯಾ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯ ಸೋತ ಬಳಿಕ ಸತತವಾಗಿ 4 ಪಂದ್ಯಗಳನ್ನು ಗೆದ್ದ ಭಾರತ ಸರಣಿಯನ್ನು ಗೆದ್ದುಕೊಂಡಿದೆ.
ಐಪಿಎಲ್‌ನಲ್ಲಿ ಸತತ ಸೋಲುಗಳಿಂದ ಶುಭಮನ್ ಗಿಲ್ ಪಾಠ ಕಲಿತಿದ್ದಾರೆ ಎನ್ನಲಾಗಿದ್ದು, 2025ರ ಐಪಿಎಲ್‌ನಲ್ಲಿ ತಂಡದ ನಾಯಕರಾಗಿ ಯಶಸ್ಸು ಕಾಣುವ ವಿಶ್ವಾಸವಿದೆ.
ಗಿಲ್ ವಿರುದ್ಧ ಟೀಕೆ
ಜಿಂಬಾಬ್ವೆ ವಿರುದ್ಧ ಭಾರತ ಸರಣಿ ಗೆದ್ದರೂ ನಾಯಕನ ವಿರುದ್ಧ ಟೀಕೆ ವ್ಯಕ್ತವಾಗಿದೆ. ಆರಂಭಿಕ ಆಟಗಾರನಾಗಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾರನ್ನು ಮುಂದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿಸಿದ್ದು ಮತ್ತು ಜೈಸ್ವಾಲ್ ಶತಕ ಗಳಿಸುವ ಅವಕಾಶ ತಪ್ಪಿಸಿದ್ದಕ್ಕೆ ಅಭಿಮಾನಿಗಳು ಕೋಪಗೊಂಡು ಸ್ವಾರ್ಥಿ ಎಂದು ಟೀಕಿಸಿದ್ದರು.












Click it and Unblock the Notifications