ಏಷ್ಯಾಕಪ್‌ಗೆ ಭಾರತ ಅರ್ಹತೆ; ಪ್ರಜ್ವಲಿಸುತ್ತಿದೆಯಾ ಭಾರತೀಯ ಫುಟ್ಬಾಲ್?
ಬೆಂಗಳೂರು, ಜೂನ್ 16: ಭಾರತ ಫುಟ್ಬಾಲ್ ತಂಡ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಗೆ ಸತತ ಎರಡನೇ ಬಾರಿ ಅರ್ಹತೆ ಗಿಟ್ಟಿಸಿದೆ. 1964ರ ಏಷ್ಯಾಕಪ್‌ನ ರನ್ನರ್ ಅಪ್ ಆಗಿದ್ದ ಭಾರತ ತಂಡ ಒಟ್ಟು ಐದು ಬಾರಿ ಏಷ್ಯಾದ ಅತ್ಯುನ್ನತ ಫುಟ್ಬಾಲ್ ಟೂರ್ನಿಯ ಪ್ರಧಾನ ಸುತ್ತಿಗೆ ಕ್ವಾಲಿಫೈ ಆಗಿದೆ.
ಎಎಫ್‌ಸಿ ಏಷ್ಯನ್ ಕಪ್‌ನ ಮೂರನೇ ಸುತ್ತಿನ ಕ್ವಾಲಿಫಯರ್ ಟೂರ್ನಿಯಲ್ಲಿ ಭಾರತ ಡಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಏಷ್ಯಾಕಪ್‌ಗೆ ಅರ್ಹತೆ ಗಿಟ್ಟಿಸಿತು. ಅಫ್ಘಾನಿಸ್ತಾನ, ಕಾಂಬೋಡಿಯಾ ಮತ್ತು ಹಾಂಕಾಂಗ್ ತಂಡಗಳನ್ನು ಭಾರತ ಸೋಲಿಸಿತು. ಅರ್ಹತಾ ಟೂರ್ನಿಗೂ ಮುನ್ನ ನಡೆದ ಕೆಲ ಅಂತಾರಾಷ್ಟ್ರೀಯ ಫ್ರೆಂಡ್ಲಿ ಪಂದ್ಯಗಳಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ತೋರದೇ ಹೋದರೂ ಅರ್ಹತಾ ಪಂದ್ಯಗಳಲ್ಲಿ ನಿರೀಕ್ಷೆ ಉಳಿಸಿಕೊಂಡಿದೆ. ಅದರಲ್ಲೂ ಹಾಂಕಾಂಗ್ ವಿರುದ್ಧ ನಡೆದ ಗ್ರೂಪ್‌ನ ಕೊನೆಯ ಪಂದ್ಯದಲ್ಲಿ ಭಾರತ 4-0 ಗೋಲುಗಳಿಂದ ಸೋಲಿಸಿದ್ದು ಗಮನ ಸೆಳೆಯಿತು.
ಈವರೆಗೆ ಐದು ಬಾರಿ ಭಾರತ ಏಷ್ಯಾ ಕಪ್‌ಗೆ ಅರ್ಹತೆ ಪಡೆದಿದೆ. ಈ ಮುಂಚೆ 1964, 1984, 2011 ಮತ್ತು 2019 ರ ಟೂರ್ನಿಗಳಲ್ಲಿ ಭಾರತ ಆಡಿದೆ. 1964ರಲ್ಲಿ ರನ್ನರ್ ಅಪ್ ಸ್ಥಾನ ಕೂಡ ಪಡೆದಿತ್ತು. ಐವತ್ತು ಮತ್ತು ಅರವತ್ತರ ದಶಕದಲ್ಲಿ ಭಾರತ ಫುಟ್ಬಾಲ್ ಪವರ್ ನೇಷನ್ ಎನಿಸಿತ್ತು. ಅರ್ಜೆಂಟೀನಾ, ಇಟಲಿ, ರೊಮೇನಿಯಾ ಮೊದಲಾದ ದೈತ್ಯ ತಂಡಗಳೊಂದಿಗೆ ನಿಕಟ ಪೈಪೋಟಿ ನೀಡಬಲ್ಲ ತಂಡವನ್ನು ಹೊಂದಿತ್ತು.
ಕಳೆದ ನಾಲ್ಕೈದು ದಶಕಗಳಿಂದ ಭಾರತೀಯ ಫುಟ್ಬಾಲ್ ಬೆಳವಣಿಗೆ ಹೊಂದದೇ ನಿಶ್ಚಲವಾಗಿದ್ದರೆ, ವಿಶ್ವದ ಅನೇಕ ದೇಶಗಳು ನಾಗಾಲೋಟ ಮಾಡಿವೆ. ಒಂದು ಹಂತದಲ್ಲಿ ಭಾರತಕ್ಕಿಂತ ದುರ್ಬಲವಾಗಿದ್ದ ಚೀನಾ, ಕೊರಿಯಾ, ಜಪಾನ್ ತಂಡಗಳು ಈಗ ಮೂರ್ನಾಲ್ಕು ಹಂತ ಮೇಲಿವೆ. ಈಗ ಎಎಫ್‌ಸಿ ಏಷ್ಯನ್ ಕಪ್‌ಗೆ ಸತತ ಎರಡನೇ ಬಾರಿ ಅರ್ಹತೆ ಪಡೆದಿರುವ ಭಾರತ ಇನ್ನಾದರೂ ಮಲಗಿರುವ ದೈತ್ಯ ಎಂಬ ಪಟ್ಟವನ್ನು ಕಳಚಿ ಎದ್ದುನಿಲ್ಲುವ ಅವಕಾಶ ಸಿಕ್ಕಿದೆ.

ಏಷ್ಯಾಕಪ್ 2023ಕ್ಕೆ ಅರ್ಹತೆ ಪಡೆದ ತಂಡಗಳು
ಒಟ್ಟು 24 ತಂಡಗಳು ಏಷ್ಯಾಕಪ್‌ನಲ್ಲಿ ಆಡುತ್ತವೆ. ವಿವಿಧ ಟೂರ್ನಿಗಳ ಮೂಲಕ ಎಲ್ಲಾ ತಂಡಗಳು ಈಗ ಅರ್ಹತೆ ಪಡೆದಿವೆ.
ಭಾರತ, ಆಸ್ಟ್ರೇಲಿಯಾ, ಜಪಾನ್, ಇರಾನ್, ಇರಾಕ್, ದಕ್ಷಿಣ ಕೊರಿಯಾ, ಲೆಬನಾನ್, ಪ್ಯಾಲೆಸ್ಟೀನ್, ಓಮನ್, ಚೀನಾ, ಕತಾರ್, ಯುಎಇ, ಸೌದಿ ಅರೇಬಿಯಾ, ವಿಯೆಟ್ನಾಂ, ಜೋರ್ಡಾನ್, ಸಿರಿಯಾ, ಉಜ್ಬೆಕಿಸ್ತಾನ್, ಬಹರೇನ್, ತಜಿಕಿಸ್ತಾನ್, ಥಾಯ್ಲೆಂಡ್, ಮಲೇಷ್ಯಾ, ಕಿರ್ಗಿಜ್ ರಿಪಬ್ಲಿಕ್, ಹಾಂಕಾಂಗ್, ಇಂಡೋನೇಷ್ಯಾ ತಂಡಗಳು 2023ರ ಏಷ್ಯಾ ಕಪ್‌ನಲ್ಲಿ ಆಡುತ್ತಿವೆ. ಆದರೆ, ಟೂರ್ನಿಯನ್ನು ಆಯೋಜಿಸಬೇಕಿದ್ದ ಚೀನಾ ಕೋವಿಡ್ ಕಾರಣಕ್ಕೆ ನಿರಾಕರಿಸಿದೆ. ಮುಂದಿನ ದಿನಗಳಲ್ಲಿ ಟೂರ್ನಿ ಎಲ್ಲಿ ನಡೆಯುತ್ತದೆ ಎಂಬುದು ನಿರ್ಧಾರವಾಗಲಿದೆ.
1964ರಲ್ಲಿ ಹೊರತುಪಡಿಸಿ ತಾನು ಆಡಿರುವ ಇನ್ನೂ ಮೂರು ಏಷ್ಯಾ ಕಪ್ ಟೂರ್ನಿಗಳಲ್ಲಿ ಭಾರತ ಮೊದಲ ಸುತ್ತನ್ನೂ ದಾಟಲಾಗಲಿಲ್ಲ. ಏಷ್ಯಾದ ಅತ್ಯುತ್ತಮ ತಂಡಗಳನ್ನು ಭಾರತ ಸೋಲಿಸುತ್ತದೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ. ಕೊನೆಯಪಕ್ಷ ಆ ದೊಡ್ಡ ತಂಡಗಳಿಗೆ ತುರುಸಿನ ಪೈಪೊಟಿಯನ್ನಾದರೂ ನೀಡಲಿ ಎಂಬುದು ಆಶಯ.

ಫೀಫಾ ನಿಷೇಧದ ತೂಗುಗತ್ತಿ
ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಸುಪ್ರೀಂ ಕೋರ್ಟ್ ಪದಚ್ಯುತಿಗೊಳಿಸಿತ್ತು. ಇದು ಫೀಫಾ ನಿಯಮದ ಉಲ್ಲಂಘನೆಯಾದ್ದರಿಂದ ಭಾರತೀಯ ಫುಟ್ಬಾಲ್ ಮೇಲೆ ನಿಷೇಧದ ತೂಗುಗತ್ತಿ ಇದೆ. ಪ್ರತಿಯೊಂದು ಫುಟ್ಬಾಲ್ ದೇಶದಲ್ಲೂ ಫೀಫಾದಿಂದ ಮಾನ್ಯವಾದ ಸಂಸ್ಥೆ ಇರಬೇಕು. ಭಾರತದಲ್ಲಿ ಎಐಎಫ್‌ಎಫ್ ಇದೆ. ತಾನು ಮಾನ್ಯ ಮಾಡಿದ ಫುಟ್ಬಾಲ್ ಸಂಸ್ಥೆ ಸ್ವತಂತ್ರವಾಗಿ ನಿರ್ವಹಣೆಯಯಾಗಬೇಕು, ಸರಕಾರವಾಗಲೀ ಬೇರೆ ಸಂಸ್ಥೆಯಾಗಲೀ ಅದರ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ಹಾಗೊಂದು ವೇಳೆ ಆದಲ್ಲಿ ಆ ರಾಷ್ಟ್ರದ ಫುಟ್ಭಾಲ್ ಮಾನ್ಯತೆಯನ್ನು ರದ್ದುಗೊಳಿಸಬಹುದು ಎಂದು ಫೀಫಾ ನಿಯಮ ಹೇಳುತ್ತದೆ.
ಭಾರತದಲ್ಲಿ ಎಐಎಫ್‌ಎಫ್ ಆಡಳಿತದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿದ್ದರಿಂದ ಫಿಫಾ ನಿಷೇಧದ ಸಾಧ್ಯತೆಯಂತೂ ಇದೆ.

ಎಐಎಫ್‌ಎಫ್ ವಿಚಾರದಲ್ಲಿ ಸುಪ್ರೀಂ ಮಧ್ಯಪ್ರವೇಶ ಯಾಕೆ?
ಪ್ರಫುಲ್ ಪಟೇಲ್ ಮೂರು ಅವಧಿ ಎಐಎಫ್‌ಎಫ್ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿ 2020 ಡಿಸೆಂಬರ್‌ಗೆ ಮುಗಿದಿದ್ದರೂ ರಾಜೀನಾಮೆ ನೀಡದೆ ಕುರ್ಚಿಯಲ್ಲಿ ಮುಂದುವರಿದಿದ್ದರು. 2017ರಲ್ಲಿ ಫುಟ್ಬಾಲ್ ಸಂಸ್ಥೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿತ್ತು. ಅದು ಇತ್ಯರ್ಥ ಆಗುವವರೆಗೂ ಸಂಸ್ಥೆಗೆ ಚುನಾವಣೆ ನಡೆಸಲು ಪ್ರಫುಲ್ ಪಟೇಲ್ ನಿರಾಕರಿಸಿದ್ದರು.
ಯಾವಾಗ ಪ್ರಫುಲ್ ಪಟೇಲ್ ರಾಜೀನಾಮೆ ನೀಡದೇ ಕುರ್ಚಿಯಲ್ಲಿ ಮುಂದುವರಿದರೋ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿತು. ಇದೇ ಮೇ ತಿಂಗಳ 18ರಂದು ಸುಪ್ರೀಂ ಕೋರ್ಟ್ ಪ್ರಫುಲ್ ಪಟೇಲ್ ಅವರಿಂದ ರಾಜೀನಾಮೆ ಕೊಡಿಸಿತು. ಫುಟ್ಬಾಲ್ ಸಂಸ್ಥೆಯಲ್ಲಿ ಆಡಳಿತಗಾರರ ಸಮಿತಿಯನ್ನು ಪುನಾರಚಿಸಿ ಮಾಜಿ ಸುಪ್ರೀಂ ನ್ಯಾಯಮೂರ್ತಿ ಎಆರ್ ದಾವೆ ನೇತೃತ್ವದ ತಂಡಕ್ಕೆ ಆಡಳಿತದ ಜವಾಬ್ದಾರಿ ಹೊರಿಸಿತು.

ಇಗೋರ್ ಸ್ಟಿಮಾಕ್ ಸಲಹೆ
ಇನ್ನೊಂದೆಡೆ, ಭಾರತ ಸತತ ಮೂರು ಪಂದ್ಯ ಗೆದ್ದು ಏಷ್ಯಾ ಕಪ್‌ಗೆ ಅರ್ಹತೆ ಪಡೆದ ಬಳಿಕ ಕೋಚ್ ಇಗೋರ್ ಸ್ಟಿಮಾಕ್ ವಾಸ್ತವ ಪರಿಸ್ಥಿತಿಯ ಕುರಿತು ಅಚ್ಚರಿಯ ಹೇಳಿಕೆ ನೀಡಿದರು.
ಭಾರತದ ಆಟಗಾರರು ಉತ್ತಮವಾಗಿ ಆಡಿದರು. ಆದರೆ ಏಷ್ಯಾದ ಪ್ರಬಲ ತಂಡಗಳಿಗಿಂತ ಭಾರತ 8-10 ವರ್ಷಗಳಷ್ಟು ಹಿಂದೆ ಬಿದ್ದಿದೆ. ನಾವು ಫುಟ್ಬಾಲ್ ಬೆಳವಣಿಗೆಯಲ್ಲಿ ಕನಿಷ್ಠ ಎಂಟು ವರ್ಷ ಹಿಂದುಳಿದಿದ್ದೇವೆ ಎಂದು ಸ್ಟಿಮಾಕ್ ಹೇಳಿದರು.
"ಭಾರತೀಯ ಫುಟ್ಬಾಲ್‌ನಲ್ಲಿ ಸದ್ಯಕ್ಕೆ ಉತ್ತಮವಾಗಿರುವ ಸ್ಟ್ರೈಕರ್‌ಗಳ ಕೊರತೆ ಇದೆ. ಇದಕ್ಕೆ ಕಾರಣ ಭಾರತದ ಫುಟ್ಬಾಲ್ ಟೂರ್ನಿಗಳ ರಚನೆ. ಐ-ಲೀಗ್‌ನಲ್ಲಿ ಸಂಪೂರ್ಣವಾಗಿ ಭಾರತೀಯ ಆಟಗಾರರಿಗೆ ಅವಕಾಶ ಇರಬೇಕು. ವಿದೇಶೀ ಆಟಗಾರರು ಐ-ಲೀಗ್‌ನಲ್ಲಿ ಆಡಬಾರದು. ಆಗ ಭಾರತೀಯ ಆಟಗಾರರಿಗೆ ಹೆಚ್ಚು ಆಟದ ಅವಕಾಶ ಸಿಗುತ್ತದೆ" ಎಂದು ಕ್ರೊವೇಶಿಯಾ ದೇಶದ ಇಗೋರ್ ಸ್ಟಿಮಾಕ್ ಸಲಹೆ ನೀಡಿದರು.
"ಭಾರತದ ಫುಟ್ಬಾಲ್ ಅನ್ನು ಎಐಎಫ್‌ಎಫ್ ನಿರ್ವಹಿಸುತ್ತೋ ಅಥವಾ ಸರಕಾರವೇ ನೋಡಿಕೊಳ್ಳುತ್ತೋ ನನಗೆ ಸಂಬಂಧಿಸಿದ ವಿಷಯ ಅಲ್ಲ. ನಾನು ಕೋಚ್ ಆಗಿ ಮುಂದುವರಿಯಬೇಕೆಂದರೆ ನಾನು ಹೇಳಿದ ರೀತಿಯಲ್ಲಿ ಫುಟ್ಬಾಲ್ ಟೂರ್ನಿಗಳು ನಡೆಯಬೇಕು. ನಾನು ಹೇಳಿದ ಸಮಯದಲ್ಲಿ ಟೂರ್ನಿ ನಡೆಯಬೇಕು" ಎಂದು ಕೋಚ್ ಖಂಡತುಂಡವಾಗಿ ಹೇಳಿಕೆ ನೀಡಿದರು.
ಸ್ಟಿಮಾಕ್ ಹೇಳಿದ್ದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಭಾರತದಲ್ಲಿ ನಡೆಯುವ ಐಎಸ್‌ಎಲ್ ಮತ್ತು ಐ ಲೀಗ್ ಎರಡು ಪ್ರಮುಖ ಫುಟ್ಬಾಲ್ ಟೂರ್ನಿಗಳಲ್ಲಿ ವಿದೇಶೀ ಆಟಗಾರರ ಪ್ರಾಬಲ್ಯವೇ ಹೆಚ್ಚು. ಅದರಲ್ಲೂ ಫಾರ್ವರ್ಡ್ ವಿಭಾಗದಲ್ಲಿ ವಿದೇಶೀ ಆಟಗಾರರೇ ಹೆಚ್ಚಿರುತ್ತಾರೆ. ಹೀಗಾಗಿ, ಭಾರತೀಯ ಆಟಗಾರರಿಗೆ ಆಡಲು ಹೆಚ್ಚು ಅವಕಾಶ ಸಿಗುವುದಿಲ್ಲ. ಹೀಗಾಗಿ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವಾಗ ಈ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗುತ್ತಾರೆ. ರಾಷ್ಟ್ರೀಯ ತಂಡಕ್ಕೆ ಆಟಗಾರರು ಆಯ್ಕೆಯಾದರೂ ಪಂದ್ಯಕ್ಕೆ ಮುನ್ನ ತರಬೇತಿ ಪಡೆಯಲು ಇವರಿಗೆ ಸಿಗುವ ಕಾಲಾವಕಾಶವೂ ಬೆರಳೆಣಿಕೆಯ ದಿನ ಮಾತ್ರ. ಇದೂ ಕೂಡ ಹೊಂದಾಣಿಕೆಯಿಂದ ಆಡಲು ಕಷ್ಟಸಾಧ್ಯವಾಗಿಸುತ್ತದೆ.

ಸುನೀಲ್ ಛೆಟ್ರಿ ಎಂಬ ಮಹಾನ್ ಶಕ್ತಿ
ಸುನೀಲ್ ಛೆಟ್ರಿಯನ್ನು ಭಾರತದ ಅತ್ಯುತ್ತಮ ಫುಟ್ಬಾಲ್ ಆಟಗಾರ ಎಂದನ್ನಲು ಅಡ್ಡಿ ಇಲ್ಲ. ಅತಿಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ಗಳಿಸಿದವರ ಸಾರ್ವಕಾಲಿಕ ಪಟ್ಟಿಯಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ. ಸಕ್ರಿಯ ಆಟಗಾರರ ಪೈಕಿ ರೊನಾಲ್ಡೊ, ಮೆಸ್ಸಿ ಬಿಟ್ಟರೆ ಛೆಟ್ರಿಯೇ ಅತಿಹೆಚ್ಚು ಗೋಲು ಗಳಿಸಿರುವುದು. ಭಾರತ ಆಡುವುದು ಸಣ್ಣಪುಟ್ಟ ತಂಡಗಳ ಜೊತೆಯಾದ್ದರಿಂದ ರೊನಾಲ್ಡೊ, ಮೆಸ್ಸಿಯಂಥವರಿಗೆ ಹೋಲಿಸಲು ಸಾದ್ಯವಿಲ್ಲವಾದರೂ ಸುನೀಲ್ ಛೇಟ್ರಿಯ ಸಾಧನೆಯನ್ನು ಸಾಮಾನ್ಯವೆಂದು ಗಣಿಸಲು ಅಸಾಧ್ಯ.
37 ವರ್ಷದ ಸುನೀಲ್ ಛೇಟ್ರಿ ನಿವೃತ್ತಿಯ ವಯೋಮಾನದಲ್ಲಿ ಇದ್ದಾರೆ. ಅಚ್ಚರಿ ಎಂದರೆ 2004ರಲ್ಲಿ ಅವರು ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹೇಗೆ ಆಡಿದ್ದರೋ ಅಷ್ಟೇ ಲವಲವಿಕೆ, ಅಷ್ಟೇ ಉತ್ಸಾಹ ಈಗಲೂ ಅವರಲ್ಲಿ ಕಾಣುತ್ತದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗಳಿಸುವ ಬಹುತೇಕ ಗೆಲುವಿನಲ್ಲಿ ಛೇಟ್ರಿ ಪಾಲು ಇರುತ್ತದೆ. ಹಾಂಕಾಂಗ್ ವಿರುದ್ಧ ಭಾರತ ಗೆದ್ದ ಬಳಿಕ ಅವರು ಹೇಳಿದ ಒಂದು ಮಾತು ಉಲ್ಲೇಖಾರ್ಹ: "ನಾನೀಗ ಅತ್ಯುತ್ತಮ ಫಾರ್ಮ್‌ಗೆ ಬಂದಿದ್ದೇನೆ" ಎಂದರು. ಇದು ಅವರಲ್ಲಿ ಅದೆಂಥ ಉತ್ಸಾಹದ ಬುಗ್ಗೆ ಇದೆ ಎಂಬುದನ್ನು ತೋರಿಸುತ್ತದೆ.
"ಏಷ್ಯಾ ಕಪ್‌ನಲ್ಲಿ ಭಾರತ ಆಡುವುದು ಮುಖ್ಯ. ಇಲ್ಲಿ ಉತ್ತಮ ತಂಡಗಳೊಂದಿಗೆ ಸೆಣಸುವ ಅವಕಾಶ ಭಾರತೀಯ ಫುಟ್ಬಾಲ್ ಆಟಗಾರರಿಗೆ ಸಿಗುತ್ತದೆ. ಟೂರ್ನಿಗೆ ಮುನ್ನ ಪೂರ್ವಭಾವಿಯಾಗಿ ನಮಗಿಂತ ಮೇಲಿರುವ ತಂಡಗಳೊಂದಿಗೆ ಫ್ರೆಂಡ್ಲಿ ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತದೆ. ಇದು ಭಾರತೀಯ ಫುಟ್ಬಾಲ್ ಬೆಳವಣಿಗೆ ಅನುಕೂಲಕರ" ಎಂದು ಸುನೀಲ್ ಛೇಟ್ರಿ ಹೇಳುತ್ತಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications