RCB: ಆರ್‌ಸಿಬಿ vs ಕೆಕೆಆರ್ ಫೈನಲ್ ಆಡ್ತಾರೆ; ಕಪ್ ಗೆಲ್ಲೋದು ನಾವೇ ಎಂದ ಎಬಿಡಿ
ಐಪಿಎಲ್ 2024ರ ರಣರೋಚಕ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಪ್ಲೇಆಫ್‌ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಕೆಕೆಆರ್ ವಿರುದ್ಧ ಸೋತರೂ ಸನ್‌ರೈಸರ್ಸ್ ಹೈದರಾಬಾದ್‌ಗೆ ಪ್ಲೇಆಫ್‌ಗೆ ಹೋಗಲು ಇನ್ನೊಂದು ಅವಕಾಶ ಇದೆ. ಇಂದು (ಬುಧವಾರ) ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣೆಸಲಿದೆ. ಈ ಪಂದ್ಯದಲ್ಲಿ ಗೆದ್ದವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯದಲ್ಲಿ ಆಡಲಿದ್ದಾರೆ, ಅಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ.

ಕ್ವಾಲಿಫೈಯರ್ 1 ಪಂದ್ಯಕ್ಕೆ ಮುನ್ನವೇ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಐಪಿಎಲ್ 2024 ಫೈನಲ್‌ನ ಭವಿಷ್ಯ ನುಡಿದಿದ್ದಾರೆ. ಕೆಕೆಆರ್ ಮತ್ತು ಆರ್‌ಸಿಬಿ ಈ ಬಾರಿ ಫೈನಲ್‌ನಲ್ಲಿ ಸೆಣೆಸಲಿದ್ದು, ಆರ್‌ಸಿಬಿ ಕಪ್ ಗೆಲ್ಲಲಿದೆ ಎಂದು ಹೇಳಿದ್ದಾರೆ.
16 ವರ್ಷಗಳ ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ, ಆರ್‌ಸಿಬಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಟೂರ್ನಿಯಿಂದಲೇ ಹೊರಬಿದ್ದರು ಎನ್ನುವಾಗ 10ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಪ್ರಶಸ್ತಿ ಗೆಲ್ಲಲು ಮೂರು ಹೆಜ್ಜೆ
ಆರ್‌ಸಿಬಿ ಪ್ರಶಸ್ತಿಯ ಬರವನ್ನು ಕೊನೆಗಾಣಿಸಲು ಇನ್ನು ಮೂರು ಸರಿಯಾದ ಹೆಜ್ಜೆಗಳನ್ನು ಇಡಬೇಕಿದೆ. ಸತತ ಆರು ಪಂದ್ಯ ಗೆದ್ದವರು ಇನ್ನು ಮೂರು ಪಂದ್ಯ ಗೆದ್ದರೆ ಹೊಸ ಇತಿಹಾಸ ಬರೆಯಲಿದ್ದಾರೆ. ಅದು ಆರ್‌ಸಿಬಿ ಕೋಟ್ಯಂತರ ಅಭಿಮಾನಿಗಳ ಆಸೆ, ಹಾರೈಕೆ ಕೂಡ ಆಗಿದೆ.
ಅಹಮದಾಬಾದ್‌ನಲ್ಲಿ ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣೆಸಲಿದೆ. ಆರ್‌ಸಿಬಿ ಸತತ ಆರು ಪಂದ್ಯ ಗೆದ್ದು ಪ್ಲೇಆಫ್‌ಗೆ ಬಂದರೆ, ರಾಜಸ್ಥಾನ ರಾಯಲ್ಸ್ ಕೊನೆಯ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸೋತಿದ್ದು, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಇಂದು ಆರ್‌ಸಿಬಿ ಹೆಚ್ಚಿನ ವಿಶ್ವಾಸದಿಂದ ಮೈದಾನಕ್ಕಿಳಿಯಲಿದೆ.
ಭಾರತಕ್ಕೆ ಬಂದ ಎಬಿಡಿ
ಇನ್ನು ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಿದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಭಾರತಕ್ಕೆ ಬಂದಿದ್ದಾರೆ. ಮುಂಬೈಗೆ ಆಗಮಿಸಿರುವ ಅವರು, ಇಂದು ಅಹಮದಾಬಾದ್‌ನಲ್ಲಿ ಕ್ರೀಡಾಂಗಣಕ್ಕೆ ಹೋಗಬಹುದು ಎನ್ನಲಾಗಿದೆ.
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್‌ಗೇಲ್ ಬಂದಿದ್ದರು, ಸಿಎಸ್‌ಕೆ ವಿರುದ್ಧ ಗೆದ್ದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರ ಜೊತೆ ಕಾಲ ಕಳೆದಿದ್ದರು.












Click it and Unblock the Notifications