ಪಟಾಕಿ ಸಿಡಿಸಿ, ಅಶಾಂತಿ ಸೃಷ್ಟಿಸಿದ ಆರೋಪ: ಪುಣೆಯಲ್ಲಿ 40 ಆರ್‌ಸಿಬಿ ಅಭಿಮಾನಿಗಳ ಬಂಧನ, ಎಫ್‌ಐಆರ್... RCB
ಆರ್‌ಸಿಬಿ ತಂಡವು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜು ರಸ್ತೆಯಲ್ಲಿನ ಗುಡ್ ಲಕ್ ಚೌಕ್ ಬಳಿ ಜೂನ್ 3 ರಾತ್ರಿ ಸಂಭ್ರಮಾಚಣೆ ಮಾಡಲಾಗಿದೆ. ಪೊಲೀಸರ ಪರವಾನಿಗೆ ಇಲ್ಲದೇ ಪಟಾಕಿ ಸಿಡಿಸಿ ದೊಂಬಿ ಎಬ್ಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು 40 ಜನರ ಮೇಲೆ ಎಫ್‌ಐಆರ್ ದಾಖಲಿಸಿ ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಹಿರಿಯ ನಿರೀಕ್ಷಕ ಗಿರೀಶ್ ನಿಂಬಾಲ್ಕರ್, 'ಆರ್‌ಸಿಬಿ ಅಭಿಮಾನಿಗಳು ನಡು ರಸ್ತೆಯಲ್ಲಿ ನೃತ್ಯ ಮಾಡಿದ್ದಾರೆ, ಗದ್ದಲವೆಬ್ಬಿಸಿದ್ದಾರೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಈ ಮೂಲಕ ದೊಂಬಿಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಪೊಲೀಸರ ಮನವಿಯನ್ನೇ ತಿರಸ್ಕರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸುವ ಮೂಲಕ ಶಾಂತಿಗೆ ಭಂಗ ಉಂಟುಮಾಡಿದ್ದಾರೆ' ಎಂದು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಸಾರಿಗೆಗೆ ಅಡ್ಡಿ ಪಡಿಸುವುದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಮತ್ತು ಪಟಾಕಿಗಳನ್ನು ಸಿಡಿಸಿ ಶಾಂತಿ ಭಂಗಪಡಿಸುವ ಆರೋಪಗಳಡಿ ಜನರನ್ನು ಬಂಧಿಸಲಾಗಿದೆ. ಸಿಸಿಟಿವಿ ಮತ್ತು ಎಐ ಆಧಾರಿತ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಗುರುತಿಸಿಲಾಗಿದ್ದು, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಕ್ರಮವನ್ನು ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆರ್‌ಸಿಬಿ ಅಧಿಕಾರಿಗಳ ಬಂಧನ
ಆರ್‌ಸಿಬಿ ತಂಡದ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಜೂನ್ 4ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಸಿಬಿಯ ಮಾರ್ಕೆಟಿಂಗ್ ಮತ್ತು ರೆವೆನ್ಯೂ ಮುಖ್ಯಸ್ಥರಾಗಿರುವ ನಿಖಿಲ್ ಸೋಸಲೆ ಅವರು ಮುಂಬೈಗೆ ತೆರಳಲು ಪ್ರಯತ್ನಿಸುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ, ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂವರು ಸಿಬ್ಬಂದಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications