ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿದ ರೈತ; ಭತ್ತದ ಬೆಳೆ ನಾಶ
ಶಿರಸಿ, ಅಕ್ಟೋಬರ್ 20: ರೈತನೊಬ್ಬ ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿದ್ದರಿಂದ ಎರಡೂವರೆ ಎಕರೆ ಭತ್ತದ ಬೆಳೆ ನಾಶವಾಗಿರುವ ಘಟನೆ ಶಿರಸಿ ತಾಲೂಕಿನ ಮರಗುಂಡಿಯಲ್ಲಿ ನಡೆದಿದೆ.
ಶಿರಸಿಯ ಹಲಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂಡಿಯ ದತ್ತು ಉಳ್ಳಪ್ಪ ನಾಯ್ಕ ಎಂಬುವವರು ಕಣ್ತಪ್ಪಿನಿಂದ ಗದ್ದೆಗೆ ಕೀಟನಾಶಕವನ್ನು ಸಿಂಪಡಿಸುವ ಬದಲು ಕಳೆನಾಶಕವನ್ನು ಸಿಂಪಡಿಸಿದ್ದಾರೆ. ಇದರ ಪರಿಣಾಮ, ಫಸಲಿಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿ ಹೋಗಿದೆ.
ಬಡ ಕೃಷಿಕನಾಗಿರುವ ಉಳ್ಳಪ್ಪ ನಾಯ್ಕ ಅವರು ಎರಡೂವರೆ ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು. ಇದರಿಂದ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಓದು ಬರಹ ಗೊತ್ತಿಲ್ಲದ ರೈತ ಉಳ್ಳಪ್ಪ ಔಷಧ ಎಂದು ತಿಳಿದು ಕಳೆನಾಶಕವನ್ನು ಸಿಂಪಡಣೆ ಮಾಡಿದ್ದಾರೆ. ಮರು ದಿನದಿಂದಲೇ ಭತ್ತದ ಸಸಿ ಮುರಟು ಹೋಗಲು ಆರಂಭವಾಗಿದೆ. ಆಗ ಅವರಿಗೆ ತಾನು ಮಾಡಿದ ಕೆಲಸ ಗಮನಕ್ಕೆ ಬಂದಿದೆ. ನೋಡನೋಡುತ್ತಿದ್ದಂತೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.

ಆದ ಯಡವಟ್ಟಿನಿಂದಾಗಿ ರೈತ ಕಂಗಾಲಾಗಿದ್ದು, ಕಣ್ಣೀರಿಡುತ್ತಿದ್ದಾರೆ. ಇದೇ ತನ್ನ ಜೀವನಾಧಾರವಾಗಿದ್ದು, ಜೀವನವನ್ನು ಸಾಗಿಸುವುದು ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.












Click it and Unblock the Notifications