ಶಿವಮೊಗ್ಗ: ಹೊಟ್ಟೆ ತುಂಬಾ ಉಂಡು ಅಡುಗೆ ಭಟ್ಟನ ಮೇಲೆ ಕುದಿಯುವ ಎಣ್ಣೆ ಎರಚಿದ ಪಾಪಿಗಳು
ಶಿವಮೊಗ್ಗ, ಮಾರ್ಚ್ 15: ಹೊಟ್ಟೆ ಬಿರಿಯುವ ಹಾಗೆ ಮಾಂಸದೂಟ ಮಾಡಿ ಯುವಕರ ಗುಂಪು ಬಿಲ್ ಕೇಳಿದಾಗ ಜಗಳ ಶುರು ಮಾಡಿ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಡುಗೆ ಭಟ್ಟನ ಮುಖದ ಮೇಲೆ ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಎರಚಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಜನ್ನಾಪುರದಲ್ಲಿ ಈ ಘಟನೆ ಸಂಭವಿಸಿದ್ದು, ಮಿಲ್ಟ್ರಿ ಹೋಟೆಲ್ ಒಂದರಲ್ಲಿ ಹೊಟ್ಟೆ ಬಿರಿಯುವ ಹಾಗೆ ಮಾಂಸದ ಊಟ ಮಾಡಿದ ಯುವಕರ ಗುಂಪು, ಬಿಲ್ ಕೇಳಿದಾಗ ಗಲಾಟೆ ಶುರು ಮಾಡಿದ್ದಾರೆ.
ಮಾಲೀಕನ ಮೇಲೆ ಹಲ್ಲೆ
ಜನ್ನಾಪುರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಮಿಲ್ಟ್ರಿ ಹೋಟೆಲ್ ಒಂದರಲ್ಲಿ ಘಟನೆ ಸಂಭವಿಸಿದೆ. ಬಿಲ್ ಕೇಳಿದ ಹೋಟೆಲ್ ಕೆಲಸಗಾರ ಸುರೇಶ್ ಮೇಲೆ ಮೊದಲಿಗೆ ಹಲ್ಲೆ ನಡೆಸಲಾಗಿದೆ. ಮಧ್ಯ ಪ್ರವೇಶ ಮಾಡಿದ ಹೋಟೆಲ್ ಮಾಲೀಕ ಲೋಹಿತ್ ಕುಮಾರ್‌ಗೂ ಯುವಕರು ಥಳಿಸಿದ್ದಾರೆ.

ಭಟ್ಟನ ಮುಖಕ್ಕೆ ಬಿಸಿ ಎಣ್ಣೆ
ಗಲಾಟೆ ಬಿಡಿಸಲು ಹೋದ ಅಡುಗೆ ಭಟ್ಟನಿಗೂ ಯುವಕರ ಗುಂಪು ಥಳಿಸಿದೆ. ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಅಡುಗೆ ಭಟ್ಟ ಮನೋಜ್ ಕುಮಾರ್ ಮುಖದ ಮೇಲೆ ಎರಚಲಾಗಿದೆ. ಕಣ್ಣು ಸೇರಿದಂತೆ ಹಲವು ಭಾಗಕ್ಕೆ ಹಾನಿಯಾಗಿದೆ. ಮನೋಜ್ ಕುಮಾರ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ಲಾಸ್ ಪೀಸ್ ಪೀಸ್
ಹೋಟೆಲ್‌ನಿಂದ ಹೊರಗೆ ಬಂದ ಯುವಕರ ಗುಂಪು, ಕಲ್ಲು ತೂರಾಟ ಮಾಡಿದೆ. ಹೋಟೆಲ್‌ನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಯುವಕರು ಗುಂಪು ಹೋಟೆಲ್ ಗಾಜುಗಳನ್ನು ಪುಡಿಗಟ್ಟುವ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಉಳಿದವರ ಶೋಧ ಕಾರ್ಯ ನಡೆಯುತ್ತಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ












Click it and Unblock the Notifications