Online Cheat: ಯುವಕರೇ ಎಚ್ಚರ... ಎಚ್ಚರ! ಆನ್‌ಲೈನ್ ವ್ಯವಹಾರಕ್ಕೆ ಹಾರಿ ಹೋಯ್ತು ಯುವಕನ ಜೀವ
ಶಿವಮೊಗ್ಗ ಆಗಸ್ಟ್ 24: ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಲು ಹೋಗಿ ನಷ್ಟವನ್ನು ಅನುಭವಿಸಿದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಲು ಹೋಗಿ ನಷ್ಟವನ್ನು ಅನುಭವಿಸಿದ ಪ್ರದೀಪ್ (27) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭದ್ರಾವತಿ ನಗರದ ಕಾಗದ ನಗರ ಬಡಾವಣೆಯ ಆರನೇ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಆನ್‌ಲೈನ್‌ನಲ್ಲಿ ಹಣ ಒನ್ ಟು ಡಬಲ್ ಆಗುತ್ತದೆಂದು ನಂಬಿ ಪ್ರದೀಪ್ ಬರೋಬ್ಬರಿ 91 ಸಾವಿರ ರೂಪಾಯಿ ಹಣ ಹೂಡಿಕೆ ಮಾಡಿದ್ದನು. ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಲು ಪ್ರದೀಪ್ ಸಾಲ ಮಾಡಿಕೊಂಡಿದ್ದರು. ಆದರೆ ಹೂಡಿಕೆ ಮಾಡಿದ ಹಣ ಡಬಲ್ ಆಗುವುದಿರಲ್ಲಿ, ಹೂಡಿಕೆ ಮಾಡಿದ ಹಣ ವಾಪಸ್ ಬರಲಿಲ್ಲ. ಆನ್‌ಲೈನ್ ಆ್ಯಪ್‌ಗಳನ್ನು ನಂಬಿ ಪ್ರದೀಪ್ ಮೋಸ ಹೋಗಿದ್ದಾನೆ. ಇದರಿಂದ ಮನನೊಂದ ಪ್ರದೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರದೀಪ್, ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಡಬಲ್ ಆಗುತ್ತದೆ ಎಂದು ಯಾವುದೋ ಆ್ಯಪ್ ಮೂಲಕ ತಿಳಿದುಕೊಂಡಿದ್ದಾರೆ. ಬಳಿಕ ಸ್ವಲ್ಪ ಹಣ ಹೂಡಿಕೆ ಮಾಡಿ ದ್ದಾನೆ. ಅದರಿಂದ ಆತನಿಗೆ ಡಬಲ್ ಹಣ ಬಂದಿದೆ. ಇದನ್ನು ನಂಬಿದ ಪ್ರದೀಪ್ ಹೆಚ್ಚು ಹಣವನ್ನು ಹೂಡಿಕೆ ಮಾಡಿ ಡಬಲ್ ಹಣ ಪಡೆಯುವ ಆಸೆಯಿಂದ ತಮ್ಮ ಬಳಿ ಹಣ ಇಲ್ಲದೇ ಇದ್ದರೂ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದಾರೆ.
ಅನ್‌ಲೈನ್‌ನಲ್ಲಿ ಹಣ ತೊಡಗಿಸಿ ಮೋಸ ಹೋಗಿರುವುದು ಗೊತ್ತಾಗಿದೆ. ಇದರಿಂದಾಗಿ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಶಿವಮೊಗ್ಗ: ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು
ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಂಗೀತ (38) ಮೃತ ಮಹಿಳೆ. ಹೊಸನಗರ ತಾಲೂಕಿನ ಗೇರುಪುರ ಮೂಲದ ಸಂಗೀತ ಅವರಿಗೆ ಹೊಸನಗರದಲ್ಲಿ ಜುಲೈ 14 ರಂದು ಮಹಿಳೆಗೆ ನಾಯಿ ಕಚ್ಚಿತ್ತು.
ಹೊಸನಗರ ಪಟ್ಟಣದಲ್ಲಿ ವಾಸವಾಗಿದ್ದ ಸಂಗೀತ ಜುಲೈ 14 ರಂದು ನಾಯಿ ಕಡಿತಕ್ಕೊಳಗಾಗಿದ್ದರು. ಬಳಿಕ ಅವರನ್ನು ಹೊಸನಗರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನದ ಹಿಂದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದ ಸಂಗೀತ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ: ತಂದೆ ಮಾಡಿದ್ದ ಸಾಲಕ್ಕೆ ಮಗನ ಮೇಲೆ ಹಲ್ಲೆ
ತಂದೆ ಮಾಡಿದ್ದ ಸಾಲಕ್ಕೆ ಮಗನ ಮೇಲೆ ಹಲ್ಲೆ ಮಾಡಿದ್ದರಿಂದ ಮನನೊಂದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸ್ಟೀವನ್ (25) ಮೃತ ಯುವಕ. ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ಕಳೆದ ಎರಡು ದಿನದ ಹಿಂದೆ ಈ ಘಟನೆ ನಡೆದಿದೆ.
ಪರಶುರಾಮ್ ಎಂಬುವರ ಬಳಿ ಜೋಸೆಫ್ 2 ಲಕ್ಷ ಸಾಲ ಪಡೆದಿದ್ದರು. ಜೋಸೆಫ್ ಮೃತ ಸ್ಟೀವನ್ ತಂದೆ. ಸಾಲ ಪಡೆದುಕೊಂಡು ತೀರಿಸಲಾಗದೇ ಜೋಸೆಫ್ ಮನೆ ಬಿಟ್ಟು ಹೊರ ರಾಜ್ಯಕ್ಕೆ ಪರಾರಿಯಾಗಿದ್ದನು. ಸಾಲ ವಸೂಲಿಗಾಗಿ ಸ್ಟೀಪನ್ ಕರೆದುಕೊಂಡು ಹೋಗಿ ಪರಶುರಾಮ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಹಲ್ಲೆಯಿಂದ ಮನನೊಂದ ಸ್ಟೀವನ್, ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications