ಸಚಿವರಾಗುವ ಮುನ್ನ ಯಡಿಯೂರಪ್ಪ ಇವೆರಡನ್ನು ಮಾಡಲಿ!
ಬೆಂಗಳೂರು, ಮೇ 19: ಪ್ರಥಮ ಚುಂಬನದಲ್ಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಮೋಘವಾಗಿ ಅತ್ಯಧಿಕ ಮತಗಳ ಅಂತರದಿಂದ ಲೋಕಸಭೆಗೆ ಪ್ರವೇಶಿಸಿದ್ದಾರೆ. ಮತ್ತು ಮೊದಲ ಪ್ರಯತ್ನದಲ್ಲೇ ಸಚಿವರಾಗಬೇಕು ಎಂದೂ ಹಂಬಲಸುತ್ತಿದ್ದಾರೆ. ಆದರೆ ಈ ವಿಷಯದಲ್ಲಿ ಅವರಿಗೆ ದಂತಭಗ್ನವಾಗುವ ಲಕ್ಷಣಗಳು ಹೆಚ್ಚಾಗಿವೆ.
ಅದೇನೇ ಇರಲಿ ಪ್ರಧಾನಿ ಮೋದಿ ಇವರನ್ನು ಸಚಿವರನ್ನಾಗಿ ಮಾಡುತ್ತಾರೋ, ಬಿಡ್ತಾರೋ ಅದು ಬೇರೆ ವಿಷಯ. ಆದರೆ ಸಂಸದರಾಗಿ ಯಡಿಯೂರಪ್ಪ ಅವರು ಜರೂರಾಗಿ ಎರಡು ಕೆಲಸಗಳನ್ನು ಮಾಡಬೇಕಿದೆ.

ಮೊದಲು ಹಿಂದಿ ಕಲಿಯಲಿ: (ಹಿಂದಿ, ಇಂಗ್ಲೀಷ್ ಬರದ ಹೆಡ್ಡನಾಗಿದ್ದೇ ತಪ್ಪಾ?: ಯಡ್ಡಿ)
ಒಂದು, ಇಂದಿನಿಂದಲೇ ಹಿಂದಿ ಕಲಿಯಬೇಕು. ಅನಂತಕುಮಾರ್ ಅವರಂತೆ ನಿರರ್ಗಳವಾಗಿ ಭಾಷಣ ಮಾಡಲು ಅಲ್ಲವಾದರೂ ಕನಿಷ್ಠ ಪ್ರಶ್ನೋತ್ತರಕ್ಕಾದರೂ ಒಂದಷ್ಟು ಹಿಂದಿ ಕಲಿಯುವುದು ಅತ್ಯವಶ್ಯ. ಇದರಿಂದಲೇ ರಾಷ್ಟ್ರಮಟ್ಟದಲ್ಲಿ ಯಡಿಯೂರಪ್ಪನವರು ಅನೇಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಅರ್ಹತೆಯಿದ್ದರೂ ಅವಕಾಶಗಳನ್ನು ಕೈಚೆಲ್ಲುವಂತಾಗಿದೆ. ಇದೀಗ ಕಾಲ ಕೂಡಿಬಂದಿದ್ದು, ಇನ್ನಾದರೂ ಹಿಂದಿ ಕಲಿಯಬೇಕು.
ಇನ್ನು, ಎರಡನೆಯದು ಭ್ರಷ್ಟಾಚಾರ ಮಾಡದಿರಲಿ:
'ಯಡಿಯೂರಪ್ಪ ಭ್ರಷ್ಟರಲ್ಲ' ಅಂದರೆ ಅವರನ್ನು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿರುವ ಶಿವಮೊಗ್ಗದ ಜನತೆಯೂ ಸೇರಿದಂತೆ ಯಾರಿಗೇ ಆಗಲಿ ನಂಬುವುದು ಕಷ್ಟ. ಸಂಸದರಾಗಿ ಹಣ ಮಾಡುವ ಹಪಾಹಪಿಗೆ ಬೀಳುವುದು ಬೇಡ. ಶಿವಮೊಗ್ಗದ ಜನತೆಗಷ್ಟೇ ಅಲ್ಲ ಅವರಿನ್ನು ದೇಶಕ್ಕೇ ಸಚಿವರಾಗಬೇಕಿದೆ. ಹಾಗಾಗಿ ಭ್ರಷ್ಟರಾಗದೆ ಪ್ರಾಮಾಣಿಕವಾಗಿ ದೇಶಕ್ಕೆ ದುಡಿಯುವ ಮೂಲಕ ಮೋದಿಗೂ ಒಳ್ಳೆಯ ಹೆಸರು ತರಲಿ, ರಾಜ್ಯಕ್ಕೂ ಒಳ್ಳೆಯ ಹೆಸರು ತರಲಿ ಎಂದು ಆಶಿಸೋಣ.












Click it and Unblock the Notifications