ಶಿವಮೊಗ್ಗದಲ್ಲಿ ಮಹಿಳೆ ಶವ ಪತ್ತೆ; ಪ್ರಕರಣಕ್ಕೆ ತಿರುವು!
ಶಿವಮೊಗ್ಗ, ಜನವರಿ 05: ಶಿವಮೊಗ್ಗದ ವಿದ್ಯಾನಗರ ರೈಲು ನಿಲ್ದಾಣದ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ಮಹಿಳೆಯ ಗುರುತು ಪತ್ತೆಯಾಗಿದ್ದು, ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವ ತಹಸೀನಾ ಎಂಬ ಮಹಿಳೆಯದ್ದು ಎಂದು ಗುರುತಿಸಲಾಗಿದೆ. ಡಿಸೆಂಬರ್ 22ರಂದು ಆಕೆ ನಾಪತ್ತೆಯಾಗಿದ್ದು, ಜನವರಿ 2ರಂದು ಶವ ಕಾರಿನಲ್ಲಿ ಪತ್ತೆಯಾಗಿದೆ. ಕುಟುಂಬಸ್ಥರು ಶವದ ಗುರುತು ಹಿಡಿದಿದ್ದಾರೆ.
ತಹಸೀನಾ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆಕೆಯ ಪತಿ, ತಾಯಿ ಮತ್ತು ಸಹೋದರಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಅವರಿಗೆ ದೂರು ಸಲ್ಲಿಸಿದ್ದಾರೆ.

ತಹಸೀನಾ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಬಳಿಕ ಆಸಿಡ್ ಎರಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಜನವರಿ 2ರಂದು ವಿದ್ಯಾನಗರ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದ ಮಾರುತಿ ಓಮ್ನಿ ಕಾರಿನಲ್ಲಿ ತಹಸೀನಾ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಡಿಸೆಂಬರ್ 22ರಿಂದ ಅಲ್ಲಿಯೇ ನಿಂತಿದ್ದ ಕಾರಿನಿಂದ ವಾಸನೆ ಬರಲು ಆರಂಭಿಸಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.












Click it and Unblock the Notifications