ಅತಿ ಹೆಚ್ಚು ಮತದಾನ: ಮತ್ತೆ ದಾಖಲೆ ಬರೆಯಲಿದೆ ಶಿವಮೊಗ್ಗ?
ಶಿವಮೊಗ್ಗ, ಮೇ 7: ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ ನಡೆಯುತ್ತಿದೆ. 14 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅಧಿಕ ಮತದಾನ ಪ್ರಮಾಣ ದಾಖಲಾಗುವ ನಿರೀಕ್ಷೆ ಇದೆ. 2019ರಲ್ಲಿ ಕ್ಷೇತ್ರ ಅತಿ ಹೆಚ್ಚಿನ ಮತದಾನದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿತ್ತು.

ಸದ್ಯದ ಮಾಹಿತಿ ಪ್ರಕಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 58.04ರಷ್ಟು ಮತದಾನವಾಗಿದೆ. ಮತದಾನ ಮಾಡಲು 6 ಗಂಟೆಯ ತನಕ ಸಮಯವಿದೆ. ಮತಗಟ್ಟೆಯ ಸರತಿ ಸಾಲಿನಲ್ಲಿ ನಿಂತ ಜನರಿಗೆ 7 ಗಂಟೆಯ ತನಕವೂ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.
ಶಿವಮೊಗ್ಗ ಗ್ರಾಮಾಂತರ ಶೇ 61.63, ತೀರ್ಥಹಳ್ಳಿ ಶೇ 60, ಸಾಗರ ಶೇ 59.26, ಭದ್ರಾವತಿ ಶೇ 53.28, ಶಿಕಾರಿಪುರ ಶೇ 60.75, ಸೊರಬ ಶೇ 59.58, ಬೈಂದೂರು ಶೇ 58.41 ಮತ್ತು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಶೇ 53.16ರಷ್ಟು ಮತದಾನವಾಗಿದೆ.
ರಾಜ್ಯಕ್ಕೆ ಪ್ರಥಮ?; ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಶೇ 76.58, 2014ರಲ್ಲಿ ಶೇ 72.36ರಷ್ಟು ಮತದಾನವಾಗಿತ್ತು. 2019ರಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾದ ಕ್ಷೇತ್ರ ಶಿವಮೊಗ್ಗ.
ಚಿಕ್ಕೋಡಿ 2014ರಲ್ಲಿ 74.30ರಷ್ಟು ಮತದಾನದ ಮೂಲಕ ದಾಖಲೆ ಬರೆದಿತ್ತು. ಆದರೆ 2019ರಲ್ಲಿ 75.62ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. ಈ ಬಾರಿ ಸಹ ಶಿವಮೊಗ್ಗ ಮತ್ತು ಚಿಕ್ಕೋಡಿ ನಡುವೆ ಮತದಾನ ಪ್ರಮಾಣಕ್ಕೆ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕೋಡಿ ಸಹ ಸೇರಿವೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ದೇಶವೇ ಕ್ಷೇತ್ರದತ್ತ ತಿರುಗು ನೋಡುವಂತೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿಯಿಂದ ಬಿ. ವೈ. ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಗಳು. ಪಕ್ಷೇತರ ಅಭ್ಯರ್ಥಿಯಾಗಿ ಕೆ. ಎಸ್. ಈಶ್ವರಪ್ಪ ಕಣದಲ್ಲಿದ್ದಾರೆ. ಅಲ್ಲದೇ ಚುನಾವಣಾ ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ 23.
ಶಿವಮೊಗ್ಗದ ಚುನಾವಣೆ ಬಿ. ಎಸ್. ಯಡಿಯೂರಪ್ಪ, ಎಸ್. ಬಂಗಾರಪ್ಪ ಕುಟುಂಬದ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ನಡುವೆ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಹಾವೇರಿಯ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಈಶ್ವರಪ್ಪ ಬಿಜೆಪಿಯಲ್ಲಿ ಇದ್ದಿದ್ದರೆ ಚುನಾವಣೆ ಅಷ್ಟು ಕುತೂಹಲ ಮೂಡಿಸುತ್ತಿರಲಿಲ್ಲ. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಸೋಲಿಸುತ್ತೇನೆ ಎಂದು ರಾಷ್ಟ್ರಭಕ್ತರ ಬಳಗ ಎಂಬ ಹೆಸರಿನಲ್ಲಿ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು, ಬಿಜೆಪಿಯಿಂದ 6 ತಿಂಗಳ ಕಾಲ ಉಚ್ಛಾಟನೆಗೊಂಡಿದ್ದಾರೆ.
ಈಗ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಇರುವ ಕಾರಣ ಬಿ. ವೈ. ರಾಘವೇಂದ್ರ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದು ಮತ್ತು ಅವರನ್ನು ಗೆಲ್ಲಿಸುವುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರಗೆ ಪ್ರತಿಷ್ಠೆಯಾಗಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಬಿಜೆಪಿಯ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಬೆಳಗಾವಿಯ ಪ್ರಭಾವಿ ಜಾರಕಿಹೊಳಿ ಕುಟುಂಬದ ಕುಡಿ, ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಣದಲ್ಲಿದ್ದಾರೆ.












Click it and Unblock the Notifications