ಶಿವಮೊಗ್ಗ : ಗುಡ್ಡದ ಮೇಲಿಂದ ಬಿದ್ದು ಕಾಡುಕೋಣ ಸಾವು
ಶಿವಮೊಗ್ಗ, ಜೂನ್ 22 : ಗುಡ್ಡದಿಂದ ಬಿದ್ದು ಕಾಡುಕೋಣವೊಂದು ಮೃತಪಟ್ಟ ಘಟನೆ ಹೊಸನಗರದಲ್ಲಿ ನಡೆದಿದೆ. ಸ್ಥಳೀಯರು ಕಾಡುಕೋಣಕ್ಕೆ ಚಿಕಿತ್ಸೆ ನೀಡಿದರೂ ಗಂಭೀರವಾಗಿ ಗಾಯಗೊಂಡಿದ್ದ ಅದು ಬದುಕುಳಿಯಲಿಲ್ಲ.
ಹೊಸನಗರ ತಾಲೂಕಿನ ನಗರ ದುಬ್ಬಾರತಟ್ಟಿಯಲ್ಲಿ ಈ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಗುಡ್ಡದಿಂದ ಜಾರಿಬಿದ್ದು ಕಾಡುಕೋಣ ಗಂಭೀರವಾಗಿ ಗಾಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಾಡುಕೋಣ ಮೃತಪಟ್ಟಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಕರಗಿ ಇಳಿಜಾರು ಪ್ರದೇಶ ನಿರ್ಮಾಣವಾಗಿತ್ತು. ಇದರಿಂದಾಗಿ ಕಾಡುಕೋಣ ಕಾಲಿಟ್ಟ ಕಡೆ ಮಣ್ಣು ಕುಸಿದಿದೆ. ಆದ್ದರಿಂದ, ಗುಡ್ಡದ ಮೇಲಿಂದ ಅದು ಬಿದ್ದು ಗಾಯಗೊಂಡಿದೆ.

ಕಾಡುಕೋಣ ಬಿದ್ದ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಅದರ ಬಳಿ ಹೋಗಲು ಮೊದಲು ಹೆದರಿದರೂ ಬಳಿಕ, ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ, ಜನರ ಮುಂದೆಯೇ ನರಳಿ-ನರಳಿ ಕಾಡುಕೋಣ ಸಾವನ್ನಪ್ಪಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ನಂತರ ಕೋಣವನ್ನು ಧಪನ್ ಮಾಡಲು ನಿರ್ಧಾರಿಸಿದರು.












Click it and Unblock the Notifications