ಕರೆ ಬಂದರೂ ಹೋಗಲಿಲ್ಲ, ತಪ್ಪು ಮಾಡಿದ್ರಾ ಈಶ್ವರಪ್ಪ!
ಶಿವಮೊಗ್ಗ, ಮಾರ್ಚ್ 20: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ಏರುವುದರಲ್ಲಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ. ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡ ಅವರು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದ್ದಾರೆ.
ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರು ಕೆ. ಎಸ್. ಈಶ್ವರಪ್ಪ ಜೊತೆ ನಡೆಸಿದ ಸಂಧಾನ ವಿಫಲವಾಗಿದೆ. ಶಿವಮೊಗ್ಗಕ್ಕೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಆದರೆ ನಗರದ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ ನಡೆದ ಸಮಾವೇಶಕ್ಕೆ ಈಶ್ವರಪ್ಪ ಗೈರಾದರು. ಈ ಮೂಲಕ ಅವರು ತಪ್ಪು ಮಾಡಿದರು ಎಂಬುದು ಸದ್ಯದ ಮಾತು.

ಶಿವಮೊಗ್ಗದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಬಿ. ವೈ. ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಗಳು. ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಮೇ 7ರಂದು ಶಿವಮೊಗ್ಗ ಕ್ಷೇತ್ರದ ಮತದಾನ ನಡೆಯಲಿದೆ.
ತಪ್ಪು ಮಾಡಿದ ಈಶ್ವರಪ್ಪ: ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಲು ಯಡಿಯೂರಪ್ಪ, ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕಾರಣ ಎಂದು ಈಶ್ವರಪ್ಪ ಆರೋಪಿಸುತ್ತಿದ್ದಾರೆ.
ಆದರೆ ಈಶ್ವರಪ್ಪರನ್ನು ದೆಹಲಿಗೆ ಬರುವಂತೆ ಸ್ವತಃ ಯಡಿಯೂರಪ್ಪ ಕರೆ ಮಾಡಿ ಆಹ್ವಾನಿಸಿದ್ದರು. ಆದರೆ ಅವರು ಆ ಕರೆಯನ್ನು ನಿರ್ಲಕ್ಷ್ಯ ಮಾಡಿದರು. ಅಲ್ಲದೇ ಮೋದಿ ಸಮಾವೇಶಕ್ಕೆ ಆಹ್ವಾನಿಸಿದರೂ ಸಹ ಶಿವಮೊಗ್ಗದಲ್ಲಿಯೇ ಇದ್ದರೂ ಈಶ್ವರಪ್ಪ ಹೋಗಲಿಲ್ಲ.
ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳುವ ಮೂಲಕ ಈಶ್ವರಪ್ಪ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಅವರು ತಮ್ಮ ಪಟ್ಟು ಸಡಿಲಿಸುವ ಸಾಧ್ಯತೆಗಳು ತೀರಾ ಕಡಿಮೆ ಇದೆ.
ಶಿವಮೊಗ್ಗ ಬಿಜೆಪಿಯ ಭದ್ರಕೋಟೆ. ಕೆ. ಎಸ್. ಈಶ್ವರಪ್ಪ ಇಷ್ಟು ವರ್ಷ ಬಿಜೆಪಿಯ ಹೆಸರಿನಲ್ಲಿಯೇ ರಾಜಕೀಯ ಮಾಡಿದವರು. ಈ ಬಾರಿ ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ, ಬಿ. ವೈ. ರಾಘವೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರನ್ನು ಎದುರು ಹಾಕಿಕೊಂಡು ಚುನಾವಣೆ ಎದುರಿಸುವುದು ಅಷ್ಟು ಸುಲಭವೇ? ಎನ್ನುವುದು ಎಲ್ಲರ ಪ್ರಶ್ನೆ.
ಕೆ. ಎಸ್. ಈಶ್ವರಪ್ಪ ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಬುಧವಾರ ಸಹ "ಲೋಕಸಭೆ ಚುನಾವಣೆ ಬಳಿಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ರಾಜೀನಾಮೆ ನೀಡುತ್ತಾರೆ" ಎಂದು ಭವಿಷ್ಯ ನುಡಿದಿದ್ದಾರೆ.
ಮತ್ತೊಂದು ಕಡೆ ಈಶ್ವರಪ್ಪ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಅಭಿಮಾನಿಗಳ ಸಭೆ, ಮಠ, ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ನ ಹಲವು ಗಣ್ಯರು, ಸ್ವಾಮೀಜಿಗಳನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಬುಧವಾರ ದೆಹಲಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಈಶ್ವರಪ್ಪ ಅಸಮಾಧಾನ ಎರಡು ಮೂರು ದಿನದಲ್ಲಿ ಬಗೆಹರಿಯಲಿದೆ ಎಂಬ ಸುಳಿವು ನೀಡಿದರು.
"ಈಶ್ವರಪ್ಪ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲಾ ನಾಯಕರು ಅವರ ಜೊತೆ ಮಾತನಾಡಿದ್ದಾರೆ. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿದ್ದೇನೆ" ಎಂದರು.
"ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಸಮಿತಿಯಲ್ಲಿ ಟಿಕೆಟ್ ತೀರ್ಮಾನ ಆಗುತ್ತದೆ. ಇದು ಯಡಿಯೂರಪ್ಪ ಅವರ ವೈಯಕ್ತಿಕ ನಿರ್ಧಾರವಲ್ಲ. ಇದು ಎರಡು ಮೂರು ದಿನದಲ್ಲಿ ಅವರಿಗೆ ಅರ್ಥವಾಗಲಿದೆ" ಎಂದು ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು.












Click it and Unblock the Notifications