ಭದ್ರಾ ಡ್ಯಾಂನಿಂದ 9 ದಿನ ನದಿಗೆ ನೀರು: ವೇಳಾಪಟ್ಟಿ
ಶಿವಮೊಗ್ಗ, ಮಾರ್ಚ್ 26: ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಮಾರ್ಚ್ 29ರಿಂದ 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತದೆ. ಜಲಸಂಪನ್ಮೂಲ ಇಲಾಖೆ ಆದೇಶದ ಹಿನ್ನಲೆಯಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಬರಗಾಲದ ಹಿನ್ನಲೆಯಲ್ಲಿ ತುಂಗಭದ್ರಾ ನದಿ ಪಾತ್ರದ ಗ್ರಾಮ-ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಆದ್ದರಿಂದ ಭದ್ರಾ ಡ್ಯಾಂನಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ನಿತ್ಯ 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತದೆ.

ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂನಿಂದ ಮಾರ್ಚ್ 29 ರಿಂದ ಏಪ್ರಿಲ್ 6ರ ತನಕ ನಿತ್ಯ ನದಿಗೆ ನೀರು ಹರಿಸಲು ಜಲಸಂಪನ್ಮೂಲ ಇಲಾಖೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ನದಿಗೆ ನೀರು ಬಿಡಲಾಗುತ್ತದೆ.
ಪತ್ರ ಬರೆದಿದ್ದ ಶಾಸಕರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಕಾಶ ಕೆ. ಕೋಳಿವಾಡ್ ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರೂ ಆಗಿರುವ ಡಿ. ಕೆ. ಶಿವಕುಮಾರ್‌ಗೆ ಪತ್ರವನ್ನು ಬರೆದಿದ್ದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡುವ ಕುರಿತು ಮನವಿ ಮಾಡಿದ್ದರು.
ಶಾಸಕರು ಪತ್ರದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರ ಮತ್ತು ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ.
ರಾಣೆಬೆನ್ನೂರು ನಗರಕ್ಕೆ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಯು ಸ್ವಗಿತಗೊಳ್ಳುವ ಸಂಭವವಿರುತ್ತದೆ. ಆದ್ದರಿಂದ ತುಂಗಭದ್ರಾ ನದಿ ನೀರನ್ನು ಅವಲಂಬಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಸದ್ಯದ ಪರಿಸ್ಥಿತಿಯಲ್ಲಿ ಪೂರೈಸುವುದು ಅತ್ಯಾವಶ್ಯವಾಗಿರುತ್ತದೆ ಎಂದು ಹೇಳಿದ್ದರು.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿಗೆ ಕುಡಿಯುವ ನೀರನ್ನು ಬಿಡುಗಡೆ ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಕೋರಿದ್ದಾರೆ. ಕಾರಣ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕೂಡಲೇ ಜೂನ್ 2024ರ ಅಂತ್ಯದವರೆಗೆ ಕುಡಿಯುವ ನೀರನ್ನು ಬಿಡುಗಡೆ ಮಾಡುವಂತೆ ತಮ್ಮಲ್ಲಿ ಈ ಮೂಲಕ ಕೋರುತ್ತೇನೆ ಎಂದು ಶಾಸಕರು ಮನವಿ ಮಾಡಿದ್ದರು.
ಜಿಲ್ಲಾಧಿಕಾರಿಗಳ ಪತ್ರ: ಹಾವೇರಿ ಜಿಲ್ಲಾಧಿಕಾರಿಗಳು ಸಹ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಕುಡಿಯುವ ನೀರಿನ ವಿಚಾರದಲ್ಲಿ ಪತ್ರವನ್ನು ಬರೆದಿದ್ದರು. ಹಾವೇರಿ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಬಗ್ಗೆ, ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ಎಂಬ ವಿಷಯವನ್ನು ಪತ್ರ ಒಳಗೊಂಡಿತ್ತು.
ಹಾವೇರಿ ಜಿಲ್ಲೆಯ ವ್ಯಾಪ್ತಿಗೆ ಬರುವ ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರ ಪಟ್ಟಿಗಳಿಗೆ ಅಲ್ಲದೆ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಮಾರ್ಗಮಧ್ಯದ ಹಳ್ಳಿಗಳಿಗೆ ಕುಡಿಯುವ ನೀರಿನ - ಪೂರೈಕೆಯನ್ನು ತುಂಗಭದ್ರಾ ನದಿಯಿಂದ ಮಾಡಲಾಗುತ್ತಿದೆ.
ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವುದಿಂದ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ. ರಾಣೆಬೆನ್ನೂರ, ಹಾವೇರಿ, ಬ್ಯಾಡಗಿ ನಗರಕ್ಕೆ ಅಲ್ಲದೇ ನದಿ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ಕುದಿಯುವ ನೀರು ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, ನೀರಿನ ಮೂಲ ಕಡಿಮೆಯಾಗುತ್ತಿರುವುದರಿಂದ ಮಾರ್ಗ ಮಧ್ಯದ ಹಳ್ಳಿಗಳಿಗೆ ಕೂಡಾ ಕುಡಿಯುವ ನೀರಿನ ಪೂರೈಕೆಯು ಸ್ಥಗಿತಗೊಳ್ಳುವ ಸಂಭವವಿರುತ್ತದೆ.
ಆದುದರಿಂದ ತುಂಗಾ ಭದ್ರಾ ನದಿಯ ನೀರನ್ನು ಅವಲಂಬಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಸದ್ಯದ ಪರಿಸ್ಥಿತಿಯಲ್ಲಿ ಪೂರೈಸುವುದು ಅವಶ್ಯವಾಗಿರುತ್ತದೆ ಹಾಗೂ ತುಂಗಾಭದ್ರಾ ನದಿಯಲ್ಲಿ ನೀರಿನ ಹರಿವು ಇರುವುದಿಲ್ಲ. ಈ ಬಗ್ಗೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾವೇರಿ ಇವರು ನಗರ ಪ್ರದೇಶಗಳಿಗೆ ಸದ್ಯದ ಪರಿಸ್ಥಿತಿಯಿಂದ ಜೂನ್ 2024 ಅಂತ್ಯದವರೆಗೆ ಒಟ್ಟು 0,214 ಟಿಎಂಸಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಬಿಡುಗಡ ಮಾಡುವಂತೆ ಕೋರಿದ್ದಾರೆ.
ಸದರಿ ವಿಷಯದ ಬಗ್ಗೆ ಈ ಕಾರ್ಯಲಯದಿಂದ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ ಮತ್ತು ತಮ್ಮ ಕಾರ್ಯಲಯಕ್ಕೂ ಪತ್ರದ ಪ್ರಕಾರ ಹಾವೇರಿ ಜಿಲ್ಲೆಗೆ ಕುಡಿಯುವ ನೀರನ್ನು ಬಿಡುಗಡೆ ಮಾಡುವಂತೆ ಈಗಾಗಲೇ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶಗಳಿಗೆ ಕೋರಿರುವಂತೆ ಹಾವೇರಿ ಜಿಲ್ಲೆಗೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕೂಡಲೇ ಜಾನ್ 2024ರ ಅಂತ್ಯದವರೆಗೆ ಒಟ್ಟು 0.2143 ಟಿಎಂಸಿ ಕುಡಿಯುವ ನೀರನ್ನು ಬಿಡುಗಡೆ ಮಾಡುವಂತೆ ಕೋರಿದೆ ಎಂದು ಪತ್ರ ಬರೆಯಲಾಗಿತ್ತು.












Click it and Unblock the Notifications