'ಎಂಥಾ ಸಾವಾ..!' ಹವ್ಯಕ ಮಾಣಿಯ ಈ ಮನದ ಹಾಡಿಗೆ ಫಿದಾ ಆಗದವರ್ಯಾರು?
'ಅಯ್ಯೋ ಯಮ್ಮನೆ ಮಾಣಿಗೆ ಹೆಣ್ಣೇ ಸಿಕ್ತಾ ಇಲ್ಲೆ...' ಅನ್ನೋದು ಗಂಡು ಮಕ್ಕಳನ್ನು ಹೆತ್ತ ಹವ್ಯಕ ಕುಟುಂಬಗಳ ಪ್ರತಿದಿನದ ಸುಪ್ರಭಾತ! ವಧುವಿನ ಕೊರತೆ ಎಂಬ ಹವ್ಯಕ ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ತಿಳಿ ಹಾಸ್ಯದ ಮೂಲಕ ಹಾಡಿದ ಕಿರಣ್ ಎನ್ ರಾವ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದಾರೆ.
ಡೆಸ್ಪಾಸಿತೋ ಆಲ್ಬಮ್ ಟ್ಯೂನ್ ಅನ್ನು 'ಎಂಥಾ ಸಾವಾ' ತಲೆಬರಹದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ರಚಿಸಿ, ಅಷ್ಟೇ ಸುಶ್ರಾವ್ಯವಾಗಿ ಹಾಡಿದ್ದಾರೆ. 'ಕಿನಾರಾ' ಎಂಬ ಕಾವ್ಯನಾಮವನ್ನಿಟ್ಟುಕೊಂಡು ಹವಿಗನ್ನಡದಲ್ಲಿ ಕವನಗಳನ್ನು ರಚಿಸಿ, ತಮ್ಮದೇ ಫೋನಿನಲ್ಲಿ ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತರಿಗೆ ಕಳಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಹೀಗೆ ಸ್ನೇಹಿತರಿಂದ, ಅವರಿವರಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಹವ್ಯಕ ಸಮಾಜ ಗಂಡು ಮಕ್ಕಳ ಮನದ ನೋವನ್ನು ಪ್ರತಿನಿಧಿಸಿದೆ.
ಸಾಗದರ ಗೋಳಗೋಡಿನವರಾದ ಕಿರಣ್ ಡಿಗ್ರಿ ಮುಗಿಸಿ, ಊರಿನಲ್ಲೇ ಸಾರಿಗೆ ಕಂಪೆನಿಯೊಂದರಲ್ಲಿ ಕ್ಯಾಶಿಯರ್ ಕೆಲಸ ಮಾಡುತ್ತಿದ್ದಾರೆ. ಮೂಲತಃ ಕೃಷಿಕ ಕುಟುಂಬದವರಾದ ಕಿರಣ್ ಅವರ ಹಾಡುಗಳು ಸಹ ಹೆಚ್ಚಾಗಿ ಹವ್ಯಕ ಸಮಾಜ, ಕೃಷಿ, ಕೂಲಿಕಾರರ ಸಮಸ್ಯೆ, ವಧುವಿನ ಕೊರತೆ ಇಂಥ ಸಮಸ್ಯೆಗಳ ಸುತ್ತಲೇ ಗಿರಕಿ ಹಾಕುತ್ತವೆ. ರಂಗಭೂಮಿಯೊಂದಿಗೆ ಒಡನಾಟವೂ ಇರುವುದರಿಂದ ಕಿರಣ್ ಅಭಿನಯದಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಅವರ ಸೆಲ್ಫಿ ವಿಡಿಯೋ ನೋಡಿದರೆ ಅದು ಗೊತ್ತಾಗುತ್ತದೆ!

ಹವ್ಯಕ ಹುಡುಗರ ರಾಷ್ಟ್ರಗೀತೆ ಅನ್ನಿಸಿರುವ ಈ 'ಎಂಥಾ ಸಾವಾ' ಗೀತೆಯನ್ನು ನೀವೂ ಒಮ್ಮೆ ಕೇಳಿ. ಮಲೆನಾಡಿನ ಈ ಅದ್ಭುತ ಪ್ರತಿಭೆಗೆ ನಿಮ್ಮ ಶುಭ ಹಾರೈಕೆ ತಿಳಿಸಿ.












Click it and Unblock the Notifications